ಪುತ್ತೂರು: ಯಕ್ಷಗಾನ ಕ್ಷೇತ್ರದ 47 ವರ್ಷಗಳ ತಿರುಗಾಟದಲ್ಲಿ ನೋವು ನಲಿವುಗಳನ್ನು ಕಂಡಿದ್ದೇನೆ. ಕಲಾಸೇವೆ ಮಾಡಿದ ಆತ್ಮ ತೃಪ್ತಿ ಇದ್ದು ನನ್ನ ಬೆಳವಣಿಗೆಗೆ ಕಲಾಭಿಮಾನಿಗಳು ಮತ್ತು ಕಲಾಪೋಷಕರು ಕಾರಣವಾಗಿದ್ದಾರೆಂದು ಭಾಗವತ ದಿನೇಶ್ ಅಮ್ಮಣ್ಣಾಯ ತಿಳಿಸಿದರು.
ಅವರು ನೇರೆಂಕಿ ಗಂಗಾಧರ ಆಚಾರ್ಯ ಅವರ ನಿವಾಸದಲ್ಲಿ ಜರಗಿದ ಕಲಾವಿದರ ಸಂಸ್ಮರಣೆ ನಿಮಿತ್ತ ಜರಗಿದ ಕಲಾವಿದರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಒಂದೇ ಮನೆತನದ ಕೀರ್ತಿಶೇಷ ಕಲಾವಿದ ಸಹೋದರರಾದ ಗಣಪತಿ ಆಚಾರ್ಯ ನೇರೆಂಕಿ , ವಿಠಲ ಆಚಾರ್ಯ ನೆಲ್ಯಾಡಿ, ಭಾಸ್ಕರ ಆಚಾರ್ಯ ಇವರ ಬಗ್ಗೆ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸಂಸ್ಮರಣೆಯ ಮತ್ತು ದಿನೇಶ ಅಮ್ಮಣ್ಣಾಯರ ಬಗ್ಗೆ ಅಭಿನಂದನ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸುಧಾ ಅಮ್ಮಣ್ಣಾಯ, ಪುರುಷೋತ್ತಮ ಆಚಾರ್ಯ, ಹರೀಶ್ ಆಚಾರ್ಯ , ಮಹೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮುರಳೀಧರ ಆಚಾರ್ಯ ಸ್ವಾಗತಿಸಿ, ಹರೀಶ್ ಆಚಾರ್ಯ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.