ಮಂಗಳೂರು: ಠೇವಣಿ ಸಂಗ್ರಹಣೆ, ಸಾಲ ವಿತರಣೆ, ವಿದ್ಯಾರ್ಥಿ ವೇತನ ನೀಡುವಿಕೆ, ಆರೋಗ್ಯ ತಪಾಸಣೆ, ವನಮಹೋತ್ಸವ, ಪುಸ್ತಕ ವಿತರಣೆ, ರಕ್ತದಾನ ಶಿಬಿರಗಳಂತಹ ಆರ್ಥಿಕ ಚಟುವಟಿಕೆಗಳಲ್ಲೇ ನಿರತರಾಗಿರುವ ಕೋ-ಆಪರೇಟಿವ್ ಸೊಸೈಟಿಗಳು ಕೂಡ ತಮ್ಮ ವಿಶೇಷ ಕಾರ್ಯಕ್ರಮಗಳಿಗೆ ಮಾನವೀಯ ಸ್ಪರ್ಶ ಹೇಗೆ ಕೊಡಬಲ್ಲವು ಎಂಬುದಕ್ಕೆ ಮಂಗಳೂರಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಮತ್ತೊಮ್ಮೆ ನಿದರ್ಶನ ಕೊಟ್ಟಿದೆ. ವಿಭಿನ್ನ ಯೋಚನೆ, ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ಜನರು ಗುರುತಿಸುವ ಕೆಲಸ ಮಾಡಬಹುದು ಎಂಬುದನ್ನು ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಾಧಿಸಿ ತೋರಿಸಿದ್ದು, ತಮ್ಮ ಸಂಸ್ಥೆಯ ವಜ್ರ ಮಹೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ಬಡ ದಂಪತಿಗೆ ಉಡುಪಿ ಜಿಲ್ಲೆಯ ಬಿಲ್ಲಾಡಿ ಗ್ರಾಮದ ಬೂದಾಡಿಯಲ್ಲಿ ಹೊಸ ಮನೆ ನಿರ್ಮಾಣ ಮಾಡಿರುತ್ತಾರೆ.
ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯು ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ನಿರ್ವಹಣೆಯಿಂದ ಹೆಸರು ವಾಸಿಯಾಗಿದೆ. ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಂಡ ಗೃಹನಿರ್ಮಾಣ ಯೋಜನೆಯಡಿಯಲ್ಲಿ ಶ್ರೀಮತಿ ಲಲಿತಾ ಮತ್ತು ಶ್ರೀ ಗಣೇಶ ಆಚಾರ್ಯ ದಂಪತಿಗಳ ಮನೆಗೆ ತೆರಳಿ ಪರಿಶೀಲಿಸಿದಾಗ ಮನೆ ಪೂರ್ತಿ ಬೀಳುವ ಸ್ಥಿತಿಯಲ್ಲಿದ್ದು, ತೀರಾ ಸಂಕಷ್ಟದಲ್ಲಿರುವಂತಿತ್ತು. ದುಡಿಯುವ ಗಂಡು ಜೀವ ಪಾರ್ಶ್ವವಾಯುವಿನಿಂದ ಮಾತು ಕಳೆದುಕೊಂಡು, ದುಡಿಯಲೂ ಆಗದೆ, ಸಂತಾನವೂ ಇಲ್ಲದೆ ಕೇವಲ ಪತ್ನಿಯ ಸಣ್ಣ ಪುಟ್ಟ ಕೆಲಸದಿಂದ ಜೀವನ ಸಾಗಿಸುತ್ತಿದೆ. ಮನೆಗೆ ತೆರಳಿದಾಗ ಮನೆ ಸೋರುತ್ತಿದ್ದು, ಹಂಚಿನ ಮನೆಯ ಪಕ್ಕಾಸು ತುಂಡಾಗಿ, ಸಿಮೆಂಟ್ ಶೀಟ್ ಒಡೆದು ನೀರು ಒಳಗೆ ಬೀಳುತ್ತಿತ್ತು. ಮನೆಯ ಒಳಗೆ ಕುಳಿತುಕೊಳ್ಳುವುದೂ ಕಷ್ಟವಾಗುತ್ತಿತ್ತು. ಇಂತಹ ಕಷ್ಟದ ಸಂದರ್ಭದಲ್ಲೇ ಆ ಮನೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡ ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮುತುವರ್ಜಿ ವಹಿಸಿಕೊಂಡು ಕೆಲಸ ನಿರ್ವಹಿಸಿತು. ರೂ.7,60,000/- ವೆಚ್ಚದಲ್ಲಿ ಸುಸಜ್ಜಿತ ಮನೆಯ ನಿರ್ಮಾಣವಾಗಿದ್ದು ಜುಲೈ 6 ರಂದು ಭಾನುವಾರ ಬೆಳಗ್ಗೆ 11.00ಕ್ಕೆ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ, ಮಾನ್ಯ ಸಂಸದರು ಶ್ರೀ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಶ್ರೀ ಧನಂಜಯ ಶೆಟ್ಟಿ, ಆಡಳಿತ ಮೊಕ್ತೇಸರರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ಕಿರಣ್ ಕುಮಾರ್ ಕೊಡ್ಗಿ, ಮಾನ್ಯ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ ಹಾಗೂ ಶ್ರೀಮತಿ ಜ್ಯೋತಿ ಕೆ.ಸಿ, ವಲಯ ಅರಣ್ಯಾಧಿಕಾರಿ, ಶಂಕರನಾರಾಯಣ ಇವರು ಸಸಿ ವಿತರಣೆ ಮಾಡಲಿದ್ದಾರೆ. ಶ್ರೀ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು ಕರ್ನಾಟಕ ಸರಕಾರ, ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ-ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯಾನಿಯನ್, ಶ್ರೀ ಶ್ರೀಧರ ಆಚಾರ್ ವಡೇರಹೋಬಳಿ, ಆಡಳಿತ ಮೊಕ್ತೇಸರರು, ಶ್ರೀ ಕಾಳಿಕಾಂಬಾ ದೇವಸ್ಥಾನ, ಬಾರ್ಕೂರು, ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾಂಗ್ರೆಸ್ ಮುಖಂಡರು ಮತ್ತು ಉದ್ಯಮಿ, ಶ್ರೀಮತಿ ಸರಸ್ವತಿ ಬಾೈ ವಂಡಾರು, ಅಧ್ಯಕ್ಷರು ಬಿಲ್ಲಾಡಿ ಗ್ರಾಮ ಪಂಚಾಯತ್ ಹಾಗೂ ರಥಶಿಲ್ಪಿ ಶ್ರೀ ರಾಜಗೋಪಾಲ ಆಚಾರ್ಯ, ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ, ಕುಂಭಾಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ, ರಮೇಶ್ ರಾವ್ ಯು., ಕೆ.ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್ ಪಾಲ್ಗೊಳ್ಳಲಿದ್ದಾರೆ.
