ಪುತ್ತೂರು: ಹಿರೆಬಂಡಾಡಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಅಂಗನವಾಡಿಯನ್ನು ಉದ್ಘಾಟನೆ ಮಾಡಿಲ್ಲ. ಮುರಿದು ಬೀಳುವ ಸ್ಥಿತಿಯಲ್ಲಿರುವ ಹಳೆಯ ಕಟ್ಟಡದಲ್ಲೇ ಮಕ್ಕಳನ್ನೂ ಕೂರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಸಭೆಯಲ್ಲಿ ನಡೆದಿದೆ. ಈ ವಿಚಾರಕ್ಕೆ ಶಾಸಕ ಅಶೋಕ್ ರೈ ಅವರು ಆಕ್ರೋಶಗೊಂಡ ಘಟನೆಯೂ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ಹಿರೆಬಂಡಾಡಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಏನೋ ಕಾರಣ ಹೇಳಿ ಉದ್ಘಾಟನೆ ಮಾಡಿಲ್ಲ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಅಂಗನವಾಡಿ ಸೂಪರ್ ವೈಸರ್ ಉಮಾವತಿಯವರು ಕಟ್ಟಡದ ಕೀ ಗ್ರಾಪಂನಲ್ಲಿದೆ. ಪಿಡಿಒ ಕೀ ಕೊಡುತ್ತಿಲ್ಲ, ಕಟ್ಟಡ ಕಾಮಗಾರಿ ನಡೆದ ಎನ್ಆರ್ ಇಜಿ ಹಣ ಬಾಕಿ ಉಂಟಂತೆ ಎಂದು ಹೇಳಿದರು. ಇದಕ್ಕೆ ಆಕ್ರೋಶಿತರಾದ ಶಾಸಕರು ಕಟ್ಟಡ ಕಾಮಗಾರಿ ಪೂರ್ಣವಾದರೆ ಉದ್ಘಾಟನೆ ಮಾಡಿಸಿ, ಕೀ ಇಟ್ಟುಕೊಳ್ಳಲು ಪಿಡಿಒ ಏನು ಅವರ ಮನೆಯಿಂದ ದುಡ್ಡು ತಂದು ಅಂಗನವಾಡಿ ಕಟ್ಟಿದ್ದ? ಇ ಒ ಅವರೇ ಪಿಡಿಒಗಳು ಯಾಕೆ ಹೀಗೆ? ಎಂದು ಪ್ರಶ್ನಿಸಿದರು.
ಈ ಬಗ್ಗೆ ಹಿರೆಬಂಡಾಡಿ ಗ್ರಾಪಂ ಕಾರ್ಯದರ್ಶಿ ಅವರನ್ನು ಶಾಸಕರು ತರಾಟೆಗೆ ಎತ್ತಿಕೊಂಡರು. ಇವತ್ತೇ ಕಟ್ಟಡದ ಕೀ ನೀಡುವಂತೆ ಶಾಸಕರು ಕಾರ್ಯದರ್ಶಿಗೆ ಸೂಚನೆ ನೀಡಿದರು.