ಪುತ್ತೂರು: ಕೆಲ ದಿನಗಳ ಹಿಂದೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅರ್ತಿಯಡ್ಕ ಎಂಬಲ್ಲಿ ಕಾಡಾನೆ ದಾಳಿ ನಡೆಸಿ ಮಹಿಳೆಯೋರ್ವರು ಮೃತಪಟ್ಟಿದ್ದು ಘಟನೆಯ ಬಳಿಕ ಜನ ಭಯಗೊಂಡಿದ್ದು , ಆನೆಯನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಬಗ್ಗೆ ಸ್ಥಳೀಯರಿಗೆ ಭರವಸೆ ನೀಡಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದು , ಸರಕಾರ ಮನವಿಗೆ ಸ್ಪಂದಿಸಿದ್ದು ಆನೆ ಓಡಿಸಲು ಇಟಿಎಫ್ ತಂಡವನ್ನು ಕಳುಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಶಾಸಕರು, ಚಿಕ್ಕಮಗಳೂರಿನಿಂದ ಇಟಿಎಫ್ ತಂಡ ಆಗಮಿಸಿದ್ದು ಇವರು ಆನೆಯನ್ನು ಓಡಿಸುವ ಕೆಲಸವನ್ನು ಮಾಡಲಿದ್ದಾರೆ. ಈ ತಂಡದ ಬಳಿ ಆನೆ ಓಡಿಸಲು ಬೇಕಾದ ಮದ್ದು ಗುಂಡುಗಳು ಸೇರಿದಂತೆ ಇತರೆ ಪರಿಕರಗಳು ಇದೆ. ಮೇ 5ರಿಂದ ಇವರ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಕೊಳ್ತಿಗೆ ಗ್ರಾಮದ ವಿವಿಧ ಕಡೆಗಳಲ್ಲಿ ಈ ತಂಡದ ಕಾರ್ಯಾಚರಣೆ ನಡೆಯಲಿದೆ. ದಟ್ಟ ಕಾಡುಗಳಿಂದ ಆಹಾರ ಹುಡುಕಿ ನಾಡಿಗೆ ಬಂದ ಆನೆಗಳನ್ನು ಮತ್ತೆ ಕಾಡಿಗೆ ಅಟ್ಟುವ ಕೆಲಸವನ್ನು ತಂಡ ಮಾಡಲಿದೆ ಎಂದು ಶಾಸಕರು ತಿಳಿಸಿದ್ದಾರೆ.