ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಪುತ್ತೂರು ಸಾಂತ್ವನ ಕೇಂದ್ರಕ್ಕೆ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಪೀಠೋಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಗವರ್ನರ್ ವಿಕ್ರಮ್ ದತ್ತ, ಕೌಟುಂಭಿಕ ನೆಮ್ಮದಿ ಸಮಾಜದ ತಳಪಾಯ. ಕುಟುಂಬದ, ಸಮಾಜದ ನೆಮ್ಮದಿಯ ನಾಳೆಗಾಗಿ ಸಾಂತ್ವನ ಕೇಂದ್ರ ಕೆಲಸ ಮಾಡುತ್ತಿದ್ದು, ರೋಟರಿಯ ಕೊಡುಗೆ ಇಲ್ಲಿ ಸದ್ವಿನಿಯೋಗ ಆಗಲಿದೆ. ಆದರೆ, ಸಾಂತ್ವಬ ಕೇಂದ್ರಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆ ಆಗಬೇಕು ಎಂಬುದೇ ನಮ್ಮ ಹಾರೈಕೆ ಎಂದರು.
ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾ ಪ್ರಿಯಾ ಮಾತನಾಡಿ, ಕಳೆದ 16 ವರ್ಷಗಳಿಂದ ಕಾರ್ಯ ಪುತ್ತೂರಿನಲ್ಲಿ ಸಾಂತ್ವನ ಕೇಂದ್ರ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ಕೌಟುಂಭಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕೌನ್ಸೆಲಿಂಗ್ ಮಾಡಲಾಗುತ್ತದೆ. ಡಿ.ಐ.ಆರ್.ಟಿ. ಕಾಯ್ದೆಯಡಿ ನೆರವು ನೀಡುತ್ತೇವೆ. ಸ್ವ – ಉದ್ಯೋಗದ ಮೂಲಕವೂ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತೇವೆ. ಇಂತಹ ನಮ್ಮ ಸಂಸ್ಥೆಗೆ ಪೀಠೋಪಕರಣಗಳ ಅಗತ್ಯ ತುಂಬಾ ಇತ್ತು. ನಮ್ಮ ಅವಶ್ಯಕ ಬೇಡಿಕೆಯನ್ನು ಅತೀ ಶೀಘ್ರದಲ್ಲಿ ನೀಡಿದ ರೋಟರಿ ಕ್ಲಬ್ ಪುತ್ತೂರು ಯುವದ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಎಂದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಮಾಡಾವು, ಝೋನಲ್ ಲೆಫ್ಟಿನೆಂಟ್ ಪೀಟರ್ ವಿಲ್ಸನ್ ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.
ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಅಶ್ವಿನಿ ಸ್ವಾಗತಿಸಿ, ವಂದಿಸಿದರು.