ಅಂತಿಮ ವಿಧಿವಿಧಾನಗಳಿಗಾಗಿ ಚಿತಾಗಾರದ ಮೇಲೆ ಮಲಗಿರುವಾಗ ವ್ಯಕ್ತಿಯೊಬ್ಬರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದ್ದು, ವ್ಯಕ್ತಿಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಪ್ರಧಾನ ವೈದ್ಯಾಧಿಕಾರಿ ಸೇರಿದಂತೆ ನಾಲ್ವರು ವೈದ್ಯರನ್ನು ಅಮಾನತುಗೊಳಿಸಿರುವ ಪ್ರಕರಣ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ.
ಅಂತಿಮ ವಿಧಿವಿಧಾನಗಳಿಗೆ ಕೆಲವೇ ಕ್ಷಣಗಳ ಮೊದಲು ಸ್ಮಶಾನದಲ್ಲಿ ಚಿತೆಯ ಮೇಲೆ ಇರುವಾಗ ವ್ಯಕ್ತಿ ಉಸಿರಾಡುತ್ತಿದ್ದ. ಅವರ ದೇಹ ಚಲಿಸುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿ ರಾಮಾವತಾರ್ ಮೀನಾ ಅವರು ಕ್ಷಿಪ್ರ ಕ್ರಮ ಕೈಗೊಂಡು ಪ್ರಧಾನ ವೈದ್ಯಾಧಿಕಾರಿ ಹಾಗೂ ಮೂವರು ವೈದ್ಯರನ್ನು ಅಮಾನತುಗೊಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ರೋಹಿತಾಶ್ (25) ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾಥ, ಕಿವುಡ ಮತ್ತು ಮೂಗನಾಗಿರುವ ಈತ ಅನಾಥಾಶ್ರಮ ಕೇಂದ್ರದಲ್ಲಿ ನೆಲೆಸಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜುಂಜುನುವಿನ ಬಿಡಿಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ನಂತರ ಅವರ ದೇಹವನ್ನು ಶವಾಗಾರದಲ್ಲಿ ಇರಿಸಲಾಯಿತು ಮತ್ತು ನಂತರ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಆಂಬುಲೆನ್ಸ್‌ನಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.
ರೋಹಿತಾಶನ ಶವವನ್ನು ಇಲ್ಲಿನ ಚಿತೆಯ ಮೇಲೆ ಇಟ್ಟಾಗ ಉಸಿರಾಟ ಶುರುವಾಗಿ, ದೇಹ ಚಲಿಸತೊಡಗಿತು. ಇದನ್ನು ಕಂಡು ಅಲ್ಲಿದ್ದವರು ಭಯಗೊಂಡರು. ಕೂಡಲೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ ರೋಹಿತಾಶ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಸೀಲ್ದಾರ್ ಮಹೇಂದ್ರ ಮುಂಡ್, ಸಾಮಾಜಿಕ ನ್ಯಾಯ ಇಲಾಖೆಯ ಉಪನಿರ್ದೇಶಕ ಪವನ್ ಪೂನಿಯಾ ಕೂಡ ಆಸ್ಪತ್ರೆಗೆ ಆಗಮಿಸಿದರು. ವಿಷಯದ ಗಂಭೀರತೆಯನ್ನು ಗಮನಿಸಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ಸಂದೀಪ್ ಪಾಚಾರ್ ಸಮ್ಮುಖದಲ್ಲಿ ವೈದ್ಯರ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿ ಡಾ.ಸಂದೀಪ್ ಪಚಾರ್, ಸಾಮಾಜಿಕ ನ್ಯಾಯ ಇಲಾಖೆಯ ಉಪನಿರ್ದೇಶಕ ಪವನ್ ಪೂನಿಯಾ ಹಾಗೂ ಇತರ ಅಧಿಕಾರಿಗಳನ್ನು ರಾತ್ರಿ 10.30ರ ಸುಮಾರಿಗೆ ತಮ್ಮ ಬಂಗಲೆಗೆ ಕರೆಸಿಕೊಂಡರು.
ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರಧಾನ ವೈದ್ಯಾಧಿಕಾರಿಯವರಿಂದಲೂ ವರದಿ ಕೇಳಲಾಗಿದೆ. ಈ ಬಗ್ಗೆ ವೈದ್ಯಕೀಯ ಇಲಾಖೆ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ರಾತ್ರಿ ಜಿಲ್ಲಾಧಿಕಾರಿಗಳು ಜಿಂದ್ ಯುವಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಡಾ. ಯೋಗೇಶ್ ಜಾರ್ಖ, ಡಾ. ನವನೀತ್ ಮೀಲ್ ಮತ್ತು ಡಾ. ಸಂದೀಪ್ ಪಚಾರ್ ಅವರನ್ನು ಅಮಾನತುಗೊಳಿಸಿದ್ದಾರೆ.