ಫ್ಲೆಕ್ಸ್, ಬ್ಯಾನರಿಗೆ ಹೈಕೋರ್ಟ್ ನಿಷೇಧ ಹೇರಿದ್ದರೂ, ಡೋಂಟ್ ಕೇರ್ ಪ್ರವೃತ್ತಿ ಮುಂದುವರಿದಿದೆ. ನೆಲಮಂಗಲದಲ್ಲಿ ರಸ್ತೆ ಪಕ್ಕ ಅಳವಡಿಸಿದ್ದ ಫ್ಲೆಕ್ಸ್ ಯುವಕನನ್ನ ಬಲಿ ಪಡೆದಿದೆ.
ಬೈಕ್ನಲ್ಲಿ ತೆರಳುವಾಗ ಫ್ಲೆಕ್ಸ್ ತಗುಲಿ ರಸ್ತೆಗೆ ಬಿದ್ದ ಯುವಕ ಸಾವನ್ನಪ್ಪಿದ್ದಾನೆ. ಬೈಕ್ಗೆ ಫ್ಲೆಕ್ಸ್ ಟಚ್ ಆಗುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
27 ವರ್ಷದ ಯುವಕ ತೇಜಸ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿ ತೆರಳುವಾಗ ರಸ್ತೆಯ ಪಕ್ಕದಲ್ಲಿ ಕಟ್ಟಿದ್ದ ಫ್ಲೆಕ್ಸ್ಗೆ ಗಾಡಿ ಟಚ್ ಆಗಿ ಬಿದ್ದಿದ್ದರು. ನೆಲಕ್ಕೆ ಬಿದ್ದ ರಭಸಕ್ಕೆ ತೇಜಸ್ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಬಳಿಕ ಆತನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದ್ರೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ತೇಜಸ್, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಜರ್ಮನಿಯಲ್ಲಿ ವ್ಯಾಸಂಗ:
ನೆಲಮಂಗಲದ ನಿವಾಸಿಯಾಗಿದ್ದ ಮೃತ ತೇಜಸ್ ಗೌಡ, ಜರ್ಮನಿಯಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ರಜೆ ಇದ್ದ ಕಾರಣ ಕೆಲ ದಿನಗಳ ಹಿಂದೆ ನೆಲಮಂಗಲಕ್ಕೆ ಬಂದಿದ್ದರು. ದುರಾದೃಷ್ಟವಶಾತ್ ತೇಜಸ್ ಫ್ಲೆಕ್ಸ್ನಿಂದಾಗಿ ಕೊನೆಯುಸಿರೆಳಿದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನೆಲಮಂಗಲ ನಗರಸಭೆ ವಿರುದ್ಧ ಆಕ್ರೋಶ
ನೆಲಮಂಗಲ ನಗರದಲ್ಲಿ ಫ್ಲೆಕ್ಸ್ಗಳು ಹಾವಳಿ ಹೆಚ್ಚಾಗಿದ್ದು, ನಗರಸಭೆಯ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ರಸ್ತೆಯಲ್ಲಿ ಅಳವಡಿಸಿರುವ ಫ್ಲೆಕ್ಸ್ಗಳನ್ನ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.



























