ಬೆಳಗಾವಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ್‘ ಬಗ್ಗೆ ಇಡೀ ವಿಶ್ವಕ್ಕೆ ವಿವರಿಸಿದ ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಇಡೀ ದೇಶಕ್ಕೆ ಹೆಮ್ಮೆಯಾಗಿದ್ದಾರೆ.
ಸೋಫಿಯಾ ಅವರನ್ನು ಟಿವಿಯಲ್ಲಿ ನೋಡಿದ ಬೆಳಗಾವಿ ಜಿಲ್ಲೆಯ ಕೊಣ್ಣೂರು ಗ್ರಾಮದ ಮೊಹಮ್ಮದ್ ಗೌಸ್ ಸಾಬ್ ಬಾಗೇವಾಡಿ ಅವರ ಮನೆ ರಾಷ್ಟ್ರೀಯ ಹೆಮ್ಮೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಈಗ ಹಲವು ಮಾಧ್ಯಮಗಳು ಮತ್ತು ಹಿತೈಷಿಗಳನ್ನು ಆಕರ್ಷಿಸುತ್ತಿದೆ.
ಗೌಸ್ ಸಾಬ್ ಬಾಗೇವಾಡಿ ಅವರ ಮಗ ತಾಜುದ್ದೀನ್ ಬಾಗೇವಾಡಿ ಅವರನ್ನು ವಿವಾಹವಾದ ಕರ್ನಲ್ ಖುರೇಷಿ, ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸಗಳಲ್ಲಿ ಒಂದಾದ ಫೋರ್ಸ್ 18 ರಲ್ಲಿ ಭಾರತೀಯ ಸೇನಾ ತರಬೇತಿ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ, ಕರ್ನಲ್ ಖುರೇಷಿ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಅವರ ಪತಿ ಝಾನ್ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ಗೌಸ್ ಸಾಬ್ ಬಾಗೇವಾಡಿ, ಸೊಸೆ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು ಮತ್ತು “ನಿನ್ನೆ ಮಧ್ಯಾಹ್ನ ತಮಗೆ ಈ ವಿಚಾರ ತಿಳಿಯಿತು” ಎಂದರು.
ನಾನು ಅವರನ್ನು(ಸೋಫಿಯಾ ಖುರೇಷಿ) ದೂರದರ್ಶನದಲ್ಲಿ ನೋಡಿದಾಗ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಜನರು ಬೆಳಗ್ಗೆಯಿಂದ ನಮ್ಮ ಮನೆಗೆ ಭೇಟಿ ನೀಡಿ ನಮ್ಮನ್ನು ಅಭಿನಂದಿಸುತ್ತಿದ್ದಾರೆ. ಇಂದು ನನ್ನ ಮಗನೊಂದಿಗೆ ಮಾತನಾಡಿದ್ದೇನೆ. ಆದರೆ ಸೊಸೆಯೊಂದಿಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದರು.
ಬುಧವಾರ ಕರ್ನಲ್ ಖುರೇಷಿ ದೂರದರ್ಶನ ಪರದೆಗಳಲ್ಲಿ ಕಾಣಿಸಿಕೊಂಡಾಗ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ನಮ್ಮ ಎಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ನಮ್ಮ ಮನೆಗೆ ಭೇಟಿ ನೀಡುತ್ತಿರುವುದರಿಂದ ಈದ್ನಂತಹ ಸಂಭ್ರಮ ಇದೆ. ಸಮಾಜದ ವಿವಿಧ ವರ್ಗಗಳ ಜನರು ತಮ್ಮ ನಿವಾಸದ ಹೊರಗೆ ಜಮಾಯಿಸಿ “ಹಿಂದೂಸ್ತಾನ್ ಜಿಂದಾಬಾದ್” ಮತ್ತು “ಜೈ ಹಿಂದ್” ನಂತಹ ಘೋಷಣೆಗಳನ್ನು ಕೂಗಿದರು ಎಂದು ಬಾಗೇವಾಡಿ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಅವರು, “ಅಮಾಯಕ ಜನರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರಿಗೆ ಮಾನವೀಯತೆಯೇ ಇಲ್ಲ. ಅವರು ಸೈತಾನರು. ಅಲ್ಲಾಹನು ಸಹ ಅವರನ್ನು ಕ್ಷಮಿಸುವುದಿಲ್ಲ ಎಂದರು.
“ಪಾಕಿಸ್ತಾನ ಒಂದು ರಾಕ್ಷಸ. ಅದು ಎಂದಿಗೂ ಮುಂದಿನಿಂದ ದಾಳಿ ಮಾಡುವುದಿಲ್ಲ. ಅದು ಯಾವಾಗಲೂ ಹಿಂದಿನಿಂದ ದಾಳಿ ಮಾಡುತ್ತದೆ” ಎಂದು ನೆರೆಯ ದೇಶದ ವಿರುದ್ಧ ಕಿಡಿ ಕಾರಿದರು.