ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡೆಯಲಿದೆ. ಈ ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ಗೇಟ್- 6ರಲ್ಲಿ ಕಾಲ್ತುಳಿತ ಸಂಭವಿಸಿ ಓರ್ವ ಆರ್ಸಿಬಿ ಅಭಿಮಾನಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಜನರು ಒಳಗೆ ನುಗ್ಗಲು ತಳ್ಳಾಟ ನಡೆಸುತ್ತಿದ್ದಾರೆ. ಸ್ಟೇಡಿಯಂ ಹೊರಗೂ ಜನಸಾಗರವೇ ಸೇರಿದ್ದು ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಮುಂದೆ ಹೋಗಲಾಗದೆ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲಿ ನೋಡಿದರೂ ಆರ್ಸಿಬಿ ಆರ್ಸಿಬಿ ಎಂಬ ಘೋಷಣೆಗಳೇ ಕೇಳುತ್ತಿದ್ದು, ಆರ್ಸಿಬಿ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಬಳಿ ನೂಕು ನುಗ್ಗಲು ಉಂಟಾಗಿದ್ದು, ಯುವಕನೋರ್ವನಿಗೆ ಕಾಲು ಮುರಿತವಾಗಿದೆ. ಗೇಟ್ ನಂಬರ್ 6ರ ಬಳಿ ಗೇಟ್ ಹತ್ತಲು ಹೋದ ಯುವಕ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಜನರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ನೂಕುನುಗ್ಗಲಿನಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಪೊಲೀಸರು ತಮ್ಮ ಜೀಪ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಗೇಟ್ ನಂಬರ್ 12ರಲ್ಲಿ ಮಹಿಳಾ ಅಭಿಮಾನಿಯೊಬ್ಬರು ಕುಸಿದುಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.