ಪುತ್ತೂರು: ಚರಂಡಿ ಪಾಲಾಗುತ್ತಿದ್ದ ಕುಡಿಯುವ ನೀರಿನ ಪೈಪನ್ನು ಪುತ್ತೂರು ನಗರಸಭೆ ದುರಸ್ತಿ ಪಡಿಸಿದೆ. ಆದರೆ ಪೈಪ್ ದುರಸ್ತಿಗೆಂದು ಡಾಂಬರು ರಸ್ತೆ ಅಗೆದು, ಅದಕ್ಕೆ ಮಣ್ಣು ತುಂಬಿ ಹಾಗೆಯೇ ಬಿಡಲಾಗಿದೆ. ಇದು ಇನ್ನೊಂದು ಅಪಾಯಕ್ಕೆ ರಹದಾರಿ ಎನ್ನುವುದನ್ನು ಮರೆತಂತಿದೆ.
ಕೊಂಬೆಟ್ಟು ಮುಖ್ಯರಸ್ತೆಯಲ್ಲಿ ಪೈಪ್ ಒಡೆದು ಕುಡಿಯುವ ನೀರು ಚರಂಡಿಯ ಒಡಲು ಸೇರುತ್ತಿತ್ತು. ಇದರ ಬಗ್ಗೆ ವೀಡಿಯೋ ಸಹಿತ ವರದಿ ಪ್ರಕಟಿಸಿದ ಶಕ್ತಿ ನ್ಯೂಸ್, ಪುತ್ತೂರು ನಗರಸಭೆಯ ಗಮನ ಸೆಳೆದಿತ್ತು.
ತಕ್ಷಣ ಸ್ಪಂದಿಸಿದ ನಗರಸಭೆ ಅಧಿಕಾರಿಗಳು, ಕುಡಿಯುವ ನೀರು ಪೋಲಾಗುವುದಕ್ಕೆ ಕಡಿವಾಣ ಹಾಕಿದರು. ಪೈಪ್ ಒಡೆದ ಪ್ರದೇಶಕ್ಕೆ ಬ್ಯಾರಿಕೇಡ್ ಹಾಕಿ, ರಸ್ತೆ ಅಗೆದು ಪೈಪ್ ದುರಸ್ತಿ ಪಡಿಸಿದರು. ನೀರು ಪೋಲಾಗುವುದು ತಪ್ಪಿತು. ಅಷ್ಟಕ್ಕೆ ಕೆಲಸ ಮುಗಿಯಿತು ಎಂಬು ಭಾವಿಸಿದರೆ ತಪ್ಪು.
ಅಗೆದು ಹಾಕಿದ ರಸ್ತೆಗೆ ಮಣ್ಣು ತುಂಬಿಸಿದರೆ, ಅದು ಇನ್ನೊಂದು ಸಮಸ್ಯೆಗೆ ಕಾರಣ ಎನ್ನುವುದನ್ನು ಅಧಿಕಾರಿಗಳು ಮರೆಯಬಾರದು. ಬದಿಯಲ್ಲೇ ಬಿಸಾಡಿರುವ ಬ್ಯಾರಿಕೇಡ್ ತಮ್ಮನ್ನು ನಿರ್ಲಕ್ಷಿಸಿದ್ದೀರಿ ಎನ್ನುವುದನ್ನು ಸಾರಿ ಹೇಳುತ್ತಿದೆ. ಆದ್ದರಿಂದ ಮುಚ್ಚಿರುವ ಹೊಂಡಕ್ಕೆ ನಗರಸಭೆ ಅಧಿಕಾರಿಗಳು, ತಕ್ಷಣ ಡಾಂಬರು ಹಾಕಿ ಸಾಂಭವ್ಯ ಅಪಾಯವನ್ನು ತಪ್ಪಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.



























