ಲಕ್ನೋ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರಿಗೆ ಉತ್ತರ ಪ್ರದೇಶದ ಝಾನ್ಸಿಯ ರೈಲ್ವೆ ನಿಲ್ದಾಣದಲ್ಲಿಯೇ ಸೇನಾಪಡೆ ವೈದ್ಯರೊಬ್ಬರು ಹೆರಿಗೆ ಮಾಡಿಸಿದ ಸಿನಿಮೀಯ ಘಟನೆ ಶನಿವಾರ ನಡೆದಿದೆ.
“ಪನ್ವೇಲ್-ಗೋರಖ್‌ಪುರ ಎಕ್ಸ್‌ಪ್ರೆಸ್’ನಲ್ಲಿ ಪ್ರಯಾಣಿಸುವಾಗ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ತಾಳಲಾರದೇ ಝಾನ್ಸಿ ನಿಲ್ದಾಣದಲ್ಲಿ ಇಳಿದಿದ್ದಾರೆ. ಆಕೆಯ ಪರಿಸ್ಥಿತಿ ಕಂಡ ರೈಲ್ವೆಯ ಮಹಿಳಾ ಸಿಬ್ಬಂದಿ ಸಹಾಯಕ್ಕೆ ಬಂದು, ಮಹಿಳೆಯನ್ನು ವೀಲ್‌ಚೇರ್‌ನಲ್ಲಿ ಕರೆದೊಯ್ಯುತ್ತಿದ್ದರು.
ಈ ವೇಳೆ ಹೈದರಾಬಾದ್ ರೈಲಿಗಾಗಿ ಕಾಯುತ್ತಿದ್ದ ಸೇನಾ ವೈದ್ಯ ಇದನ್ನು ಗಮನಿಸಿ ಅವರತ್ತ ಧಾವಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಅರಿತ ವೈದ್ಯ ಮೇಜರ್ ಡಾ.ರೋಹಿತ್ ಬಚ್‌ವಾಲಾ, ಸ್ಥಳದಲ್ಲಿ ಲಭ್ಯವಿದ್ದ ಪುಟ್ಟ ಚಾಕು, ಹೇರ್‌ಪಿನ್ ಬಳಸಿ ತಾಯಿ ಮಗುವಿನ ಜೀವ ಉಳಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.