ರಾಮೇಶ್ವರಂ: ಏ.6ರಂದು ರಾಮನವಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಗಳ ಪವಿತ್ರ ಕ್ಷೇತ್ರ ರಾಮೇಶ್ವರಂ ಅನ್ನು ಸಂಪರ್ಕಿಸುವ ನೂತನ ಪಾಂಬನ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಈ ಹಿಂದೆ 1914ರಲ್ಲಿ ನಿರ್ಮಿತ ರೈಲ್ವೆ ಸೇತುವೆಯ ಮೂಲಕ ರಾಮೇಶ್ವರಂಗೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಆ ಸೇತುವೆ ಶಿಥಿಲಗೊಂಡ ಕಾರಣ 2022ರಲ್ಲಿ ರೈಲು ಸಂಪರ್ಕ ಕಡಿತಗೊಳಿಸಲಾಗಿತ್ತು. ಅದರ ಸಮೀಪದಲ್ಲೇ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದು ಇದೀಗ ಪೂರ್ಣಗೊಂಡಿದೆ. ಈಗಾಗಲೇ ಈ 2 ಕಿ.ಮೀ. ಉದ್ದದ ಸೇತುವೆಯಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಅಂದು ರೈಲು ಸಂಚಾರಕ್ಕೂ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಇದು ದೇಶದ ಸಾರಿಗೆ ಮತ್ತು ಸಮುದ್ರ ಮೂಲ ಸೌಕರ್ಯದಲ್ಲಿ ಒಂದು ಹೊಸ ಮೈಲುಗಲ್ಲು. ಹೊಸ ಪಂಬನ್ ರೈಲ್ವೆ ಸೇತುವೆ 2.1 ಕಿ.ಮೀ. ಉದ್ದವನ್ನು ಹೊಂದಿದೆ. 2019ರ ಫೆಬ್ರವರಿಯಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 2024ರ ನವೆಂಬರ್ ನಲ್ಲಿ ಪೂರ್ಣಗೊಂಡಿತು. ಈ ಹೊಸ ಸೇತುವೆಯು 110 ವರ್ಷಗಳಷ್ಟು ಹಳೆಯದಾದ ರಚನೆಯನ್ನು ಬದಲಾಯಿಸಿದೆ ಹೀಗಾಗಿ ಇದು ಅದ್ಭುತ ಎಂಜಿನಿಯರಿಂಗ್ ಕೆಲಸವಾಗಿ ಗುರುತಿಸಿಕೊಂಡಿದೆ. ರಾಮೇಶ್ವರಂ ದ್ವೀಪ ಮತ್ತು ಭಾರತದ ಮುಖ್ಯ ಭೂಭಾಗಕ್ಕೆ ಶೀಘ್ರದಲ್ಲಿ ಸುರಕ್ಷಿತವಾಗಿ ಈ ಸೇತುವೆ ಸಂಪರ್ಕವನ್ನು ಕಲ್ಪಿಸುತ್ತದೆ.