ಪುತ್ತೂರು: ಎಸ್.ಕೆ. ಗೋಲ್ಡ್’ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ಪುತ್ತೂರು ಶಾಖಾ ವ್ಯವಸ್ಥಾಪಕಿ ಉಷಾ ಎನ್. ಆಚಾರ್ ಅವರು ಇಂದು ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಾರೆ.
ಒಟ್ಟು 37 ವರ್ಷ ಸೊಸೈಟಿಗಳಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಎಸ್.ಕೆ.ಜಿ.ಐ. ಬ್ಯಾಂಕ್ ವ್ಯವಸ್ಥಾಪಕಿಯಾಗಿ ನಿವೃತ್ತಿಗೊಳ್ಳುತ್ತಿದ್ದಾರೆ.
ಉಷಾ ಎನ್. ಆಚಾರ್ ಅವರು ಮೂಲತಃ ಸುಬ್ರಹ್ಮಣ್ಯದವರು. ಚಿನ್ನದ ಕೆಲಸಗಾರರಾಗಿರುವ ಪತಿ ನಾಗೇಶ್ ಆಚಾರ್ಯ ಪಡೀಲ್ ಅವರು ಪುತ್ತೂರಿನ ಪಡೀಲ್ ನಿವಾಸಿಯಾಗಿದ್ದು, ಪಡೀಲ್ ನಲ್ಲಿಯೇ ವಾಸ್ತವ್ಯ ಹೊಂದಿದ್ದಾರೆ.
ಸುಬ್ರಹ್ಮಣ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸ ಪಡೆದ ಇವರು, ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದರು.
1987ರ ಸೆಪ್ಟೆಂಬರ್ 1ರಂದು ಐನೆಕಿದು ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘಕ್ಕೆ ಉದ್ಯೋಗಿಯಾಗಿ ಸೇರ್ಪಡೆಗೊಂಡರು. 1988ರಲ್ಲಿ ವಿವಾಹವಾದರೂ, 1994ರವರೆಗೆ ಸಹಕಾರಿ ಸಂಘದಲ್ಲೇ ಉದ್ಯೋಗ ಮುಂದುವರಿಸಿದರು. 1995 ಜನವರಿ 1ರಂದು ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋ ಆಪರೇಟಿವ್ ಸೊಸೈಟಿಯ ಪುತ್ತೂರು ಶಾಖೆಯಲ್ಲಿ ಕಿರಿಯ ಸಹಾಯಕಿಯಾಗಿ ಸೇರ್ಪಡೆಗೊಂಡರು. 2016ರಲ್ಲಿ ಸಂಸ್ಥೆಯ ಮಂಗಳೂರು ಕಾರ್ ಸ್ಟ್ರೀಟ್ ಶಾಖೆಗೆ ಹಿರಿಯ ಸಹಾಯಕಿಯಾಗಿ ಭಡ್ತಿ ಪಡೆದುಕೊಂಡು, ವರ್ಗಾವಣೆಗೊಂಡರು. 2 ವರ್ಷಗಳ ಬಳಿಕ ವ್ಯವಸ್ಥಾಪಕಿಯಾಗಿ ಭಡ್ತಿ ಪಡೆದುಕೊಂಡು ಪುತ್ತೂರು ಶಾಖೆಗೆ ಮರಳಿದರು. 2020ರಲ್ಲಿ ಮತ್ತೆ ಮಂಗಳೂರು ಕಾರ್ ಸ್ಟ್ರೀಟ್ ಶಾಖೆಗೆ ವರ್ಗಾವಣೆಗೊಂಡಿದ್ದು, 2022ರಲ್ಲಿ ಪುತ್ತೂರು ಶಾಖೆಗೆ ಮರಳಿ ಬಂದರು.
2022-23ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಎಸ್.ಕೆ.ಜಿ.ಐ. ಕೋ ಆಪರೇಟಿವ್ ಸೊಸೈಟಿ ನೀಡುವ ಸಾಧನಾ ಪ್ರಶಸ್ತಿಗೆ ಪುತ್ತೂರು ಶಾಖೆ ಪ್ರಥಮ ಸ್ಥಾನಿಯಾಗುವಂತೆ ಮಾಡಿರುವುದು ಇವರ ಸಾಧನೆಯೇ ಸರಿ.
ಇವರ ಪುತ್ರಿಯರಾದ ಕಾವ್ಯಾ ಭರತ್ ಬೆಂಗಳೂರಿನ ಯಲಹಂಕ ಪಿಎಂಆರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದು, ಇನ್ನೊರ್ವ ಪುತ್ರಿ ಪಲ್ಲವಿ ಅವರು ಬೆಂಗಳೂರಿನ ಕೋರಮಂಗಲ ಐಬಿಎಂನಲ್ಲಿ ಸಾಫ್ಟ್’ವೇರ್ ಇಂಜಿನಿಯರ್ ಆಗಿದ್ದಾರೆ.