ತಿರುಪತಿ: ವೆಂಕಟೇಶ್ವರ ಮೃಗಾಲಯದಲ್ಲಿ ಸೋಮವಾರ(ನ.25) ರಾಯಲ್ ಬೆಂಗಾಲ್ ಟೈಗರ್ ‘ಮಧು’ ವೃದ್ಧಾಪ್ಯ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಹುಲಿ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2018 ರಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ‘ಮಧು’ ಎಂಬ ಹುಲಿಯನ್ನು ಮೃಗಾಲಯಕ್ಕೆ ತರಲಾಗಿತ್ತು ಎನ್ನಲಾಗಿದೆ.
ಸುಮಾರು ಏಳು ವರ್ಷಗಳಿಂದ ಹುಲಿ ತಮ್ಮ ಆರೈಕೆಯಲ್ಲಿತ್ತು ಎಂದು ಮೃಗಾಲಯದ ಕ್ಯುರೇಟರ್ ಸಿ.ಸೆಲ್ವಂ ತಿಳಿಸಿದ್ದಾರೆ. ಆದರೆ, ವೃದ್ಧಾಪ್ಯ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತಿದ್ದುದರಿಂದ ಪ್ರತ್ಯೇಕ ಸೆಲ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದ ಕಾರಣ ಕಳೆದ ಎರಡು ವರ್ಷಗಳಿಂದ ‘ಮಧು’ ಸಾರ್ವಜನಿಕರ ದರ್ಶನಕ್ಕೆ ಸಿಗುತ್ತಿರಲಿಲ್ಲ ಎಂದಿದ್ದಾರೆ.
ಇನ್ನು ಮೃಗಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಕಳೆದ ಎರಡು ತಿಂಗಳಿನಿಂದ ಹುಲಿ ಆಹಾರ ಮತ್ತು ನೀರು ತೆಗೆದುಕೊಳ್ಳುತ್ತಿರಲಿಲ್ಲ ಎಂದಿದ್ದಾರೆ. ವೆಂಕಟೇಶ್ವರ ಪಶುವೈದ್ಯಕೀಯ ಕಾಲೇಜಿನ ವೈದ್ಯರ ತಂಡ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ವೃದ್ಧಾಪ್ಯ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಹುಲಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.