Friday, November 22
Share News

ಬೆಂಗಳೂರು: ಆಸ್ತಿ ನೋಂದಣಿ, ಖಾತೆ ವರ್ಗಾವಣೆ ಸೇರಿ ಇನ್ನಿತರ ಕೆಲಸಗಳಿಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲು ಇನ್ನುಮುಂದೆ ಭಾನುವಾರವೂ ಸಬ್ ರಿಜಿಸ್ಟ್ರಾರ್‌ ಕಚೇರಿಗಳು ತೆರೆದಿರಲಿವೆ. ರೊಟೇಷನ್ ಆಧಾರದಲ್ಲಿ ಭಾನುವಾರದಂದು ಪ್ರತಿ ಜಿಲ್ಲೆಯಲ್ಲಿ ಒಂದು ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲಿದೆ. ಮೊದಲಿಗೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಜಾರಿ ಮಾಡುತ್ತಿದ್ದು, ನಂತರ ಇತರ ಮಹಾನಗರಗಳಲ್ಲಿ ಏಪ್ರಿಲ್‌ನಿಂದ ಆರಂಭಿಸುವ ಚಿಂತನೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸದ ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಲು ಹಲವರಿಗೆ ಕಷ್ಟ ಆಗುತ್ತದೆ, ಕೆಲಸಕ್ಕೆ ರಜೆ ಹಾಕಿ ಬರಬೇಕಾಗುತ್ತದೆ. ಹೀಗಾಗಿ ಜನರ ಅನುಕೂಲಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲೂ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಭಾನುವಾರವೂ ತೆರೆಯಲು ನಿರ್ಧಾರ ಮಾಡಲಾಗಿದ್ದು, ಭಾನುವಾರ ಕೆಲಸ ನಿರ್ವಹಿಸಿದ ಸಿಬ್ಬಂದಿಗೆ ಮಂಗಳವಾರ ರಜೆ ನೀಡುವ ಬಗ್ಗೆ ಚರ್ಚೆಯಾಗಿದೆ. ಭಾನುವಾರ ಎಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿರುತ್ತದೆ ಎಂದು ಮೊದಲೇ ಅಧಿಕಾರಿಗಳು ತಿಳಿಸುತ್ತಾರೆ ಎಂದು ಮಾಹಿತಿ ನೀಡಿದರು.

ಖಾತೆ ವರ್ಗಾವಣೆಗೆ ಆಟೋ ಮ್ಯುಟೇಷನ್‌
ಕಂದಾಯ ಇಲಾಖೆಯಲ್ಲಿ ಕೆಲವು ಸುಧಾರಣೆಗಳನ್ನು ತಂದಿದ್ದೇವೆ. ಸರ್ಕಾರಿ ಕಚೇರಿಗಳಿಗೆ ಜನರು ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಖಾತೆ ವರ್ಗಾವಣೆಗೆ ಆಟೋ ಮ್ಯುಟೇಷನ್‌ಗೆ ಕ್ರಮ ಕೈಗೊಂಡಿದ್ದು 6 ತಿಂಗಳಲ್ಲಿ 14,21,116 ಮ್ಯುಟೇಷನ್ ಎಂಟ್ರಿ ಆಗಿದೆ. ಬ್ಯಾಂಕ್‌ನಲ್ಲಿ ಸಾಲ‌ ತೆಗೆದುಕೊಂಡರೆ ವಿಭಾಗ, ಎಸಿ ಸಿವಿಲ್ ಕೋರ್ಚ್‌ನಲ್ಲಿ ಎಂಟ್ರಿ ಆದಾಗ ಅದು ಎಂಟ್ರಿ ಆಗುತ್ತದೆ. ಈ ಹಿಂದೆ ಆಗಿರುವ ಅಷ್ಟು ವರ್ಗಾವಣೆಗಳು ಆಟೋ ಮ್ಯುಟೇಷನ್‌ನಲ್ಲಿ ಎಂಟ್ರಿ ಆಗುತ್ತದೆ. ಪಹಣಿಗಳಲ್ಲಿ ಹೆಸರು ಬದಲಾವಣೆ ಇಂಡೀಕರಣ ಕೂಡ ಇನ್ನು ಮುಂದೆ ಶೇ.72 ರಷ್ಟು ಆಟೋಮೆಟಿಕ್ ಆಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಬ್ಯಾಂಕ್‌ನಲ್ಲಿ ಸಾಲ ತೀರಿಸಿದಾಗ ರೆವಿನ್ಯೂ ಇನ್ಸ್‌ಪೆಕ್ಟರ್ ಅನುಮೋದನೆ ಬೇಕಿತ್ತು, ಈಗ ಆ ರೀತಿ ಕಾಯುವಂತಿಲ್ಲ. ಎಲ್ಲಿ ಸಮಸ್ಯೆ ಬರಬಹುದು ಅಂತಹವುಗಳನ್ನು ಆಟೋ ಮ್ಯುಟೇಷನ್ ಮಾಡುತ್ತಿಲ್ಲ. ಸೇಲ್ ಡೀಡ್, ವಿಲ್, ಗಿಫ್ಟ್ ಡೀಡ್, ಪಾರ್ಟಿಶನ್ ಡೀಡ್ ಸೇರಿ 5 ರಿಂದ 6 ಆಟೋ ಮ್ಯೂಟೇಷನ್ ಮಾಡುತ್ತಿಲ್ಲ. ಉಳಿದ ಶೇ.72ರಷ್ಟು ಆಟೋಮೆಟಿಕ್ ಆಗಿ ಕೆಲಸ ಆಗಲಿದೆ. ಎಲ್ಲಾ ಮನೆಯಲ್ಲಿದ್ದುಕೊಂಡೇ ಕೆಲಸ ಮಾಡಿಕೊಳ್ಳಬಹುದು, ಇದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಬೀಳಲಿದೆ, ಜನರು ಕಚೇರಿ ಸುತ್ತಾಡೋದು ತಪ್ಪಲಿದೆ ಎಂದು ಹೇಳಿದರು.

ಆರ್‌ಟಿಸಿಗೆ ಆಧಾರ್ ಜೋಡಣೆ
ಇವೆಲ್ಲದರ ಜತೆಗೆ ಆರ್‌ಟಿಸಿಗೆ ಆಧಾರ್ ಜೋಡಣೆ ಕೂಡ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಹೀಗಾಗಿ ಎಲ್ಲರೂ RTC ಜತೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು. ಆಧಾರ್ ಜತೆ ಲಿಂಕ್ ಮಾಡಿದರೆ ಅಕ್ರಮ ತಪ್ಪಿಸಬಹುದು. ಅಲ್ಲದೇ ಸರ್ಕಾರದ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ನನ್ನ ಆಸ್ತಿ ಎಂಬ ಯೋಜನೆಯನ್ನು ನನ್ನ ಭೂಮಿ, ನನ್ನ ಗುರುತು ಎಂಬ ಶೀರ್ಷಿಕೆಯಡಿ ಆಧಾರ್ ಕಡ್ಡಾಯ ಮಾಡಲಾಗಿದೆ. ಇನ್ನುಮುಂದೆ ಆಸ್ತಿ ನೋಂದಣಿ ಮಾಡೋ ಸಮಯದಲ್ಲಿ ಆಧಾರ್ ಅನ್ನು ಲಿಂಕ್ ಮಾಡುವ ಸೇವೆ ಪ್ರಾರಂಭ ಮಾಡುತ್ತಿದ್ದೇವೆ. ಇದಕ್ಕೆ ಕ್ಯಾಬಿನೆಟ್ ಒಪ್ಪಿಗೆ
ಪಡೆಯಲಾಗಿದೆ. ಆಸ್ತಿ ನೋಂದಣಿಯಲ್ಲಿ ಮೋಸ ನಡೆಯುತ್ತಿದೆ. ಅಕ್ರಮ ತಡೆಯಲು ಆಧಾರ್ ಜೋಡಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.


Share News

Comments are closed.

Exit mobile version