ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ ಕೂಗು ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಮತ್ತು ಸಚಿವರು ಧ್ವನಿ ಎತ್ತುತ್ತಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಇಂದು (ಸೋಮವಾರ) ಮಂಗಳೂರಿನಲ್ಲಿ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್-2025 ಬ್ಯಾಡ್ಮಿಂಟನ್ ಟೂರ್ನಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಇದಾದ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.
ಐದು ವರ್ಷ ನೀವೇ ಮುಖ್ಯಮಂತ್ರಿನಾ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೆಲವು ಸಚಿವರು ಹೇಳಿಕೆ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕಿದೆ. ಆದರೆ ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಒಪ್ಪಿದ್ರೆ ನಾನೇ 5 ವರ್ಷ ಸಿಎಂ ಎಂದು ತಿಳಿಸಿದರು.
ಡಿಕೆಶಿ ಪ್ರತಿಕ್ರಿಯೆ
ದೆಹಲಿ ಭೇಟಿ ನೀಡಿದರ ಬಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ನಮ್ಮ ಪಕ್ಷದ ಹಿರಿಯ ವರ್ಕಿಂಗ್ ಕಮಿಟಿ ಸದಸ್ಯೆ ಅಂಬಿಕಾ ಸೋನಿ ಅವರ ಮನೆಗೆ ಭೇಟಿ ನೀಡಿದ್ದೆ. ಅವರ ಮನೆಯವರು ಇತ್ತೀಚೆಗೆ ತೀರಿಕೊಂಡಿದ್ದರು. ಆದ್ದರಿಂದ ಸಾಂತ್ವನ ಹೇಳಲು ನಾನು ಖಾಸಗಿಯಾಗಿ ಅವರ ಮನೆಗೆ ಹೋಗಿದ್ದೆ ಎಂದು ದೆಹಲಿ ಭೇಟಿಯ ಕುರಿತಾದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದೇ ವೇಳೆ ಹೈಕಮಾಂಡ್ ಒಪ್ಪಿದ್ರೆ ನಾನೇ 5 ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ದೆಹಲಿ ಪ್ರವಾಸದಲ್ಲಿ ನನ್ನ ಬಗ್ಗೆ ಏನಾದರೂ ಚರ್ಚೆ ಮಾಡಿಕೊಂಡರು, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಹೋಗಿರುವ ಕೆಲಸದ ಬಗ್ಗೆ ಮಾತ್ರ ಹೇಳುತ್ತೇನೆ. ಸಿಎಂ ಹೇಳಿದ ಮೇಲೆ ಇನ್ನೇನಿದೆ? ಅವರು ಏನು ಹೇಳುತ್ತಾರೋ, ನಾವು ಹಾಗೆ ನಡೆದುಕೊಳ್ಳುತ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

























