ಚಿಕ್ಕಮಗಳೂರು: ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಪ್ರಸಂಗ ನ.12ರ ಮಂಗಳವಾರ ನಡೆದಿದೆ.
ಚಿಕಿತ್ಸೆಗೆಂದು ಬಂದಿದ್ದ ತಾಲೂಕಿನ ಗುತ್ತಿ ಗ್ರಾಮದ ಸುಂದರೇಶ್ (31) ಮೃತಪಟ್ಟಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಸುಂದರೇಶ್ ಮೃತಪಟ್ಟಿದ್ದಾರೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಮೃತ ಸುಂದರೇಶ್ ಪತ್ನಿ ರೇಣುಕಾ, ನಮಗೆ 1 ಗಂಡು, 1 ಹೆಣ್ಣು ಚಿಕ್ಕ-ಚಿಕ್ಕ ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ನನ್ನ ಪತಿಗೆ ಬೆಳಿಗ್ಗೆ 4ಕ್ಕೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡು ಅಸ್ವಸ್ಥರಾದಾಗ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಆಸ್ಪತ್ರೆಯ ಒಳಗೆ ಹೋಗಲು ನನ್ನ ಪತಿಗೆ ಸಾಧ್ಯವಾಗಲಿಲ್ಲ. ವೀಲ್ ಚೇರ್ ತರಲು ಸಿಬ್ಬಂದಿ ಬಳಿ ಕೇಳಿಕೊಂಡಾಗ ಅವರು ವೀಲ್ ಚೇರ್ ತರಲಿಲ್ಲ. ಉಡಾಫೆಯಿಂದ ನನ್ನ ಪತಿಯ ಕುತ್ತಿಗೆ ಪಟ್ಟಿ ಹಿಡಿದು ಆಸ್ಪತ್ರೆಯ ಒಳ ಭಾಗಕ್ಕೆ ದೂಡಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಇರಲಿಲ್ಲ. ದಾದಿಯೊಬ್ಬರು 4 ಮಾತ್ರೆಯನ್ನು ನೀಡಿ ಅದರಲ್ಲಿ ಒಂದನ್ನು ನನ್ನ ಪತಿಗೆ ಕುಡಿಸಿದ್ದಾರೆ. ಬೆಳಿಗ್ಗೆ 10 ಗಂಟೆಯವರೆಗೆ ವೈದ್ಯರಾಗಲಿ ಅಥವಾ ಸಿಬ್ಬಂದಿಗಳಾಗಲಿ ಯಾರೊಬ್ಬರೂ ನನ್ನ ಪತಿಯ ಬಳಿ ಸುಳಿಯಲಿಲ್ಲ. ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ನನಗೂ ಆರೋಗ್ಯ ಸರಿಯಿಲ್ಲ. ನನ್ನನ್ನು ಮತ್ತು ನನ್ನ ಮಕ್ಕಳನ್ನು ಸಾಕಲು ಯಾರು ಇಲ್ಲದೆ ಬೀದಿಗೆ ಬಿದ್ದಿದ್ದೇವೆ ಎಂದು ನೊಂದುಕೊಂಡರು.