ಮಡಿಕೇರಿ: ಕೊಲೆಯಾಗಿದ್ದ ಬಾಲಕಿಯೋರ್ವಳ ಅಸ್ಥಿಪಂಜರದ ಅಂತ್ಯಸಂಸ್ಕಾರ 18 ವರ್ಷದ ನಂತರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದೆ.
ಅಯ್ಯಂಗೇರಿಯ 13 ವರ್ಷದ ಬಾಲಕಿ 2006 ರಲ್ಲಿ ಕಾಸರಗೋಡು ಮೂಲದ ಕೆ.ಸಿ.ಹಂಜ ಎಂಬಾತ ಮನೆ ಕೆಲಸಕ್ಕೆಂದು ಗೋವಾಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಬಿಸಿ ಗಂಜಿ ಬಾಲಕಿಯ ಮೈ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಆದರೆ ಬಾಲಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗುವ ಭಯದಿಂದ ಬಾಲಕಿಯನ್ನು ಕೊಲೆ ಮಾಡಿ ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿದ್ದು, ಗೋವಾದಲ್ಲಿ ಕೆ.ಸಿ.ಹಂಜ ಹೂತು ಹಾಕಿದ್ದ.
ಪೋಷಕರಿಗೆ ಈತ ನಂತರ ಬಾಲಕಿ ಕಾಣೆಯಾಗಿರುವುದಾಗಿ ಹೇಳಿದ್ದ. ಪುತ್ರಿ ನಾಪತ್ತೆ ಕುರಿತು ಅನುಮಾನ ವ್ಯಕ್ತಪಡಿಸಿದ ಪೋಷಕರು ಕೆ.ಸಿ.ಹಂಜನ ವಿರುದ್ಧ ದೂರು ದಾಖಲು ಮಾಡಿದ್ದರು. ಅನಂತರ ಕಾಸರಗೋಡಿನಲ್ಲಿ 90 ದಿನಗಳ ಹೋರಾಟ, ಪ್ರತಿಭಟನೆ ನಡೆಸಿದ್ದು, ಪ್ರಕರಣದ ತನಿಖೆಗೆ ಒತ್ತಾಯ ಮಾಡಿತ್ತು.
ಈ ಪ್ರಕರಣವನ್ನು ಕೇರಳ ಸರಕಾರ ಅಪರಾಧ ವಿಭಾಗಕ್ಕೆ ತನಿಖೆಯನ್ನು ವರ್ಗಾವಣೆ ಮಾಡಿತ್ತು. 2008 ರಲ್ಲಿ ಬಾಲಕಿಯ ಅಸ್ಥಿಪಂಜರ ಗೋವಾದಲ್ಲಿ ಪತ್ತೆಯಾಗಿತ್ತು. ನಂತರ ಹಂಜನನ್ನು ಬಂಧನ ಮಾಡಿ, ಕಾಸರಗೋಡು ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು.
ಆದರೆ ಕೇರಳ ಸರಕಾರ 2019 ರಲ್ಲಿ ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಿತ್ತು. ಆದರೆ ಕೊಲೆಯಾದ ಸಫಿಯಾಳ ಅಸ್ಥಿಪಂಜರ ಕಾಸರಗೋಡು ನ್ಯಾಯಾಲಯದಲ್ಲಿಯೇ ಇತ್ತು. ನಂತರ ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ದೇಹದ ಅವಶೇಷ ಹಸ್ತಾಂತರ ಮಾಡಬೇಕೆಂದು ಕೋರಿದ್ದರು.