ಪುತ್ತೂರು: ದೆಹಲಿಯ ಕಾರು ಸ್ಫೋಟದ ಹಿಂದಿರುವ ಪೂರ್ವನಿಯೋಜಿತ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಘಟಕ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿದ್ದು, ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯದ ಹಿಂದೆ ಇರುವ ಜಾಲವನ್ನು ಭೇದಿಸಿ, ಈ ಕೃತ್ಯ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ ಹಾಗೂ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅಗ್ರಹಿಸಿದ್ದಾರೆ.
ದೆಹಲಿಯ ಜನನಿಬಿಡ ಪ್ರವಾಸಿ ತಾಣವಾದ ಕೆಂಪು ಕೋಟೆಯ ಚಾಂದನಿ ಚೌಕ್‌ನ ಲಾಲ್ ಕಿಲಾ ಬಳಿ ಸೋಮವಾರ ರಾತ್ರಿ ಕಾರೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದ ಪರಿಣಾಮ 10 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಮಹಾದುರಂತ ಸಂಭವಿಸುವ ಕೆಲವೇ ಗಂಟೆಗಳ ಮೊದಲು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಫರಿದಾಬಾದ್‌ನ ಎರಡು ಮನೆಗಳಿಂದ 350 ಕೆಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ ಸುಮಾರು 3,000 ಕೆಜಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಘಟನೆಯ ಬೆನ್ನಲ್ಲೇ ದೆಹಲಿಯಲ್ಲಿ ಸ್ಫೋಟ ಸಂಭವಿಸಿದೆ. ಇದೊಂದು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಕೃತ್ಯಕ್ಕೆ ಬಲಿಯಾದವರಿಗೆ ವಿಶ್ವ ಹಿಂದೂ ಪರಿಷದ್ ಸಂತಾಪ ಸೂಚಿತ್ತದೆ. ಗಾಯಗೊಂಡವರು ಶೀಘ್ರ ಗುಣವಾಗಲೆಂದು ದೇವರ ಬಳಿ ಪ್ರಾರ್ಥಿಸುತ್ತೇವೆ. ಹಾಗೆಯೇ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.

























