ನವದೆಹಲಿ: ಭಾನುವಾರದಂದು (ಅ. 26) ವರದಿಯಾಗಿದ್ದ ದೆಹಲಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಆ್ಯಸಿಡ್ ಅಟ್ಯಾಕ್ ಕೇಸಿಗೆ ಟ್ವಿಸ್ಟ್ ಸಿಕ್ಕಿದೆ.
ಹಲವಾರು ದಿನಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ, ತನಗೆ ಪರಿಚಯವಿರುವ ವ್ಯಕ್ತಿಯೊಬ್ಬ ತನ್ನಿಬ್ಬರು ಸ್ನೇಹಿತರನ್ನು ಕರೆದುಕೊಂಡು ಆಕೆಯ ಮೇಲೆ ಆ್ಯಸಿಡ್ ಎರಚಿ ಹೋಗಿದ್ದ ಎಂಬ ಆರೋಪಗಳು ಮಹಿಳೆ ಹೇಳಿಕೆ ಕೊಟ್ಟಿದ್ದಳು. ಅದರ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಅದಾಗಿ 24 ಗಂಟೆ ಕಳೆಯುತ್ತಿದ್ದಂತೆ ಇಡೀ ಕೇಸ್ ಟೋಟಲ್ಲಾಗಿ ಉಲ್ಟಾ ಆಗಿದೆ. ಆಕೆಯ ಮೇಲೆ ಆ್ಯಸಿಡ್ ಅಟ್ಯಾಕ್ ಆಗಿದೆ ಎಂದು ಹೇಳಿದ್ದೇ ಒಂದು ನಾಟಕ ಎಂದು ಹೇಳಲಾಗಿದೆ. ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ವ್ಯಕ್ತಿಯು ತನಗೆ ಪರಿಚಯವಿದ್ದು ತನ್ನನ್ನು ಇತ್ತೀಚೆಗೆ ಹಿಂಬಾಲಿಸುತ್ತಿದ್ದ. ಅ. 26ರಂದು ತನ್ನ ಸ್ನೇಹಿತರೊಡನೆ ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಆಗ ತಾನು ಕೈಗಳನ್ನು ಅಡ್ಡ ಹಿಡಿದು ಮುಖವನ್ನು ರಕ್ಷಿಸಿಕೊಂಡಿದ್ದು, ಅದರಿಂದಾಗಿ, ಕೈಗಳಿಗೆ ಆ್ಯಸಿಡ್ ಬಿದ್ದಿದೆ ಎಂದೆಲ್ಲಾ ಹೇಳಿದ್ದಳು ಆ ಯುವತಿ.
ಆದರೆ, ತನಿಖೆಯ ಸಂದರ್ಭದಲ್ಲಿ ಆಕೆಯು ನೀಡಿದ್ದ ಹೇಳಿಕೆಯೂ ಆಕೆಯ ಪರಿಸ್ಥಿತಿಯೂ ಹೋಲಿಕೆ ಇರಲಿಲ್ಲ. ಅಲ್ಲದೆ, ವೈದ್ಯರ ಪರೀಕ್ಷೆಯಲ್ಲಿ ಆಕೆಯ ಕೈಗಳ ಮೇಲೆ ಬಿದ್ದಿರುವುದು ಆ್ಯಸಿಡ್ ಅಲ್ಲ, ಬದಲಿಗೆ ಟಾಯ್ಲೆಟ್ ಕ್ಲೀನರ್ ಎಂಬುದು ಬೆಳಕಿಗೆ ಬಂದಿದೆ. ಸಾಲದ್ದಕ್ಕೆ, ಪೊಲೀಸರು ಘಟನೆ ನಡೆದ ಸ್ಥಳದ ಸಿಸಿಟಿವಿ ಇತ್ಯಾದಿಗಳನ್ನು ಪರಿಶೀಲಿಸಿದಾಗ ಯಾವ ವ್ಯಕ್ತಿಯ ಮೇಲೆ ಇವರು ಆಪಾದನೆ ಮಾಡಿದಾಗ ಮಹಿಳೆಯರು ಆಪಾದನೆ ಮಾಡಿದ ವ್ಯಕ್ತಿಯು ಆ ಸ್ಥಳಕ್ಕೆ ಬಂದಿಲ್ಲದಿರುವುದು ತಿಳಿದುಬಂದಿದೆ.
ಸಂಪೂರ್ಣ ತನಿಖೆಯ ನಂತರ ಗೊತ್ತಾದ ಸತ್ಯವೇನೆಂದರೆ, ಯುವತಿಯ ತಂದೆಯು ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಹೇಳಲಾದ ವ್ಯಕ್ತಿಯ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಆಕೆಯನ್ನು ಒಲಿಸಿಕೊಳ್ಳಲು ಆಕೆಗೆ ಕಾಟ ಕೊಡುತ್ತಿದ್ದ. ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಆತನನ್ನು ಹುಡುಕಲು ಶುರು ಮಾಡಿದ್ದರು. ಇದು ಗೊತ್ತಾಗಿ ಮನೆಯಿಂದ ಎಸ್ಕೇಪ್ ಆಗಿದ್ದ ಯುವತಿಯ ತಂದೆ, ತಾನು ಪ್ರೇಮಿಸುತ್ತಿದ್ದ ದೂರು ಕೊಟ್ಟಿದ್ದ ಮಹಿಳೆಯ ಗಂಡನನ್ನು ಯಾವುದಾದರೂ ಕೇಸಿನಲ್ಲಿ ಸಿಕ್ಕಿರಲು ಯೋಚಿಸಿ, ಅದಕ್ಕೆ ತನ್ನ ಮಗಳು- ಮಗನ ಸಹಾಯ ಪಡೆದು ಈ ಆ್ಯಸಿಡ್ ವ್ಯೂಹ ರಚಿಸಿದ್ದ ಎಂಬುದು ತಿಳಿದುಬಂದಿದೆ. ಇದಿಷ್ಟೂ ಗೊತ್ತಾದ ಮೇಲೆ ತನಿಖೆಯನ್ನು ತೀವ್ರವಾಗಿಸಿದ ಪೊಲೀಸರು, ಕಡೆಗೂ ಎಸ್ಕೇಪ್ ಆಗಿದ್ದ ಯುವತಿಯ ತಂದೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ, ಆ್ಯಸಿಡ್ ದಾಳಿ ಹೇಳಿಕೆ ನೀಡಿದ್ದ ಯುವತಿ ಹಾಗೂ ಆಕೆಯ ತಂದೆಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
























