ಕರ್ನಾಟಕದಲ್ಲಿ ಜಾತಿ ಗಣತಿ ನಡೆಯುತ್ತಿದ್ದರೆ, ಅತ್ತ ಉತ್ತರಪ್ರದೇಶದಲ್ಲಿ ಜಾತಿ ಹೆಸರನ್ನು ಎಲ್ಲೂ ಬಳಸದಂತೆ ಆದೇಶ ಹೊರಡಿಸಲಾಗಿದೆ.
ಸೆ. 16ರಂದು ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ಈ ಮಹತ್ವದ ಆದೇಶ ಹೊರಡಿಸಿದೆ.
ಉತ್ತರಪ್ರದೇಶದಲ್ಲಿನ್ನು ಜಾತಿ ಆಧಾರಿತ ಸಾರ್ವಜನಿಕ ರ್ಯಾಲಿಗಳನ್ನು ನಡೆಸುವಂತಿಲ್ಲ, ಪೊಲೀಸ್ ಎಫ್‌ಐಆರ್‌ಗಳಲ್ಲಿ ಜಾತಿ ಹೆಸರನ್ನು ಸೇರಿಸುವಂತಿಲ್ಲ, ವಾರೆಂಟ್ ನೀಡುವಾಗ ಜಾತಿಯನ್ನು ಬಳಸದೇ ಅಪ್ಪಅಮ್ಮನ ಹೆಸರನ್ನು ಗುರುತಿಗಾಗಿ ಬಳಸಬೇಕು. ಠಾಣೆಯಲ್ಲಿ ಜಾತಿ ಕಾಲಂ ಅನ್ನೇ ತೆಗೆಯಬೇಕು, ಜಾತಿಗಳನ್ನು ವೈಭವೀಕರಿ ಸುವಂತ ನಾಮಫಲಕ ಗಳು, ಇದು ಇಂತಹ ಜಾತಿಗೆ ಸೇರಿದ ಊರು ಎಂಬಂತಹ ಫಲಕಗಳನ್ನು ತೆಗೆಯಬೇಕು, ವಾಹನ ಗಳಲ್ಲಿ ಜಾತಿಗಳ ಹೆಸರನ್ನು ಎದ್ದು ಕಾಣುವಂತೆ ಹಾಕಿಕೊಂಡಿದ್ದರೆ ಅದನ್ನೂ ತೆಗೆಸಬೇಕು ಎಂದು ಉತ್ತರಪ್ರದೇಶ ಸರಕಾರ ಹೇಳಿದೆ.
ಜಾತಿಯ ಗುರುತು ರಾಷ್ಟ್ರೀಯ ಐಕ್ಯತೆ ಮತ್ತು ಸಾರ್ವಜನಿಕ ಸುಸ್ಥಿತಿಗೆ ಮಾರಕ ಎಂದು ಎನ್ನುವುದು ಇದರ ಹಿಂದಿನ ಉದ್ದೇಶ.
ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ನಡೆಯುತ್ತಿರುವ ಹೊತ್ತಿನಲ್ಲೇ ಉತ್ತರಪ್ರದೇಶದಲ್ಲಿ ಇಂತಹ ಆದೇಶ ಜಾರಿಯಾಗಿರುವುದು ಕುತೂಹಲ ಮೂಡಿಸಿದೆ. 2027ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಇನ್ನೇನು 2 ವರ್ಷಗಳಿರುವಾಗ ಜಾರಿಯಾಗಿರುವ ಈ ಆದೇಶದಿಂದ ಮುಂದೇನಾಗಲಿದೆ ಎನ್ನುವ ಪ್ರಶ್ನೆಗಳಿವೆ. ಜಾತಿ ಆಧಾರದಲ್ಲಿ ಮತ ಕೇಳುವ ರಾಜಕೀಯ ಪಕ್ಷಗಳಿಗೆ ಇದು ಹೊಡೆತ ನೀಡಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಆಡಳಿತ ಪಕ್ಷ ಬಿಜೆಪಿ ಅದರ ಮಿತ್ರ ಪಕ್ಷಗಳಾದ ಅಪ್ಪಾದಳ, ಸುಹಲ್ ದೇವ್ ಸಮಾಜ ಪಕ್ಷ, ನಿಷಾದ ಪಕ್ಷಗಳೂ ಸೇರಿ ಕಾಂಗ್ರೆಸ್, ಸಮಾಜ ವಾದಿ ಪಕ್ಷಗಳ ವಿರೋಧ ಪಕ್ಷಗಳಿಗೂ ಇಕ್ಕಟ್ಟಿನ ಪರಿಸ್ಥಿತಿ ತಂದಿಟ್ಟಿದೆ.
ಇವುಗಳಿಗೆ ನಿರ್ಬಂಧ:
ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ) ತನ್ನ ಸಿಸಿಟಿಎನ್‌ಎಸ್ (ಅಪರಾಧಗಳ ನಿಗಾ ಮತ್ತು ವ್ಯವಸ್ಥೆ) ದಾಖಲೆಗಳಲ್ಲಿ ಜಾತಿ ವಿಭಾಗ ತೆಗೆಯಬೇಕು.
ಸರಕಾರಿ ಅಥವಾ ಖಾಸಗಿ ವಾಹನಗಳಲ್ಲಿ ಜಾತಿ ಹೆಸರನ್ನು ಕಾಣುವಂತೆ ಬಳಸಿದ್ದರೆ ಮೋಟಾರು ವಾಹನಗಳ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುತ್ತದೆ.
ಪೊಲೀಸ್ ದಾಖಲೆಗಳಲ್ಲಿ ಗುರುತಿಗಾಗಿ ಸಂಬಂಧಪಟ್ಟ ವ್ಯಕ್ತಿಗಳ ತಾಯಿ-ತಂದೆಯ ಹೆಸರನ್ನು ನಮೂದಿಸಬೇಕು, ಜಾತಿಗೆ ಸ್ಥಾನವಿಲ್ಲ.
ಜಾತಿ ಹೆಸರು ಕೈಬಿಡುವ ಆದೇಶ ಪೂರ್ಣವಾಗಿ ಜಾರಿಗೆ ಬರುವವರೆಗೆ ಕೆಲವು ಸರಕಾರಿ ದಾಖಲೆಗಳಲ್ಲಿ ಜಾತಿ ಅಂಕಣವನ್ನು ಖಾಲಿ ಬಿಡಬೇಕು.
ಪೊಲೀಸ್ ಠಾಣೆಯಲ್ಲಿರುವ ಯಾವುದೇ ಜಾತಿ ಆಧಾರಿತ ಅಂಕಣಗಳು, ನಾಮಫಲಕ ಗಳನ್ನು ತಕ್ಷಣ ತೆಗೆದು ಹಾಕಬೇಕು.
ಬಂಧನ ಮತ್ತು ಜಪ್ತಿ ಆದೇಶ ನೀಡುವ ಸಂದರ್ಭದಲ್ಲಿ ಜಾತಿ ಮಾಹಿತಿಗಳನ್ನು ಕೇಳುವಂತಿಲ್ಲ. ಇದು ಈ ಜಾತಿಗೆ ಸೇರಿದು ಊರು, ಈ ಜಾತಿಯ ಜಹಗೀರು ಎಂಬ ಫಲಕಗಳಿದ್ದರೆ ಅದನ್ನು ಕೂಡಲೇ ತೆಗೆಯಲಾಗುತ್ತದೆ.
ರಾಷ್ಟ್ರೀಯ ಏಕತೆಗೆ ಧಕ್ಕೆ ಎಂಬ ಕಾರಣದಿಂದ ಜಾತಿ ಹೆಸರಿನಲ್ಲಿ ನಡೆಸುವ ಸಾರ್ವಜನಿಕ ರ್ಯಾಲಿಗಳಿಗೆ ನಿರ್ಬಂಧ.
ಜಾತಿಗಳನ್ನು ವೈಭವೀಕರಿಸುವ ಅಥವಾ ಜಾತಿಗಳನ್ನು ನಿಂದಿಸುವ ಸಾಮಾಜಿಕ ತಾಣಗಳ ಪೋಸ್ಟ್‌ಗಳ ವಿರುದ್ಧ 2021ರ ಐಟಿ ನಿಯಮಗಳಡಿ ಕ್ರಮ.
ಪರಿಶಿಷ್ಟ ಜಾತಿ, ಪಂಗಡಗಳ ಕಾಯಿದೆಯಡಿ (ಎಸ್‌ಸಿ, ಎಸ್‌ಟಿ ಕಾಯಿದೆ) ದಾಖಲಾಗುವ ಪ್ರಕರಣಗಳಿಗೆ ಮಾತ್ರ ಜಾತಿ ಉಲ್ಲೇಖಕ್ಕೆ ಅವಕಾಶ