ಜೈಪುರ: ರಾಜಸ್ಥಾನದ ಉದಯೋನ್ಮುಖ ತಾರೆ ಮಣಿಕಾ ವಿಶ್ವಕರ್ಮ (Manika Vishwakarma) 2025 ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮಣಿಕಾ ಅವರು ನವೆಂಬರ್ 21ರಂದು ಥಾಯ್ಲೆಂಡ್ ನಲ್ಲಿ ನಡೆಯಲಿರುವ 74ನೇ ಮಿಸ್ ಯೂನಿವರ್ಸ್ ಜಾಗತಿಕ ವೇದಿಕೆಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿ ವಿವರಿಸಿದೆ.
ಜೈಪುರದಲ್ಲಿ ನಡೆದ ರಾಷ್ಟ್ರೀಯ ಫೈನಲ್ ಸ್ಪರ್ಧೆಯಲ್ಲಿ 24 ವರ್ಷದ ಮಣಿಕಾ ಗೆಲುವು ಸಾಧಿಸುವ ಮೂಲಕ ಇದೀಗ ರಾಷ್ಟ್ರದಿಂದ ಜಾಗತಿಕ ವೇದಿಕೆಯತ್ತ ತಮ್ಮ ಹೆಜ್ಜೆಯನ್ನು ಹಾಕುವ ಮೂಲಕ ನಿರೀಕ್ಷೆ ಮೂಡಿಸಿರುವುದಾಗಿ ವರದಿ ತಿಳಿಸಿದೆ.
ರಾಜಸ್ಥಾನದ ಜೈಪುರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024ರ ರಿಯಾ ಸಿಂಘಾ ಮಣಿಕಾ ವಿಶ್ವಕರ್ಮಗೆ ಕಿರೀಟ ತೊಡಿಸಿ ಶುಭ ಹಾರೈಸಿದ್ದಾರೆ. ಸೋಮವಾರ ನಡೆದ ಸ್ಪರ್ಧೆಯಲ್ಲಿ ಮಣಿಕಾ ಅವರೊಂದಿಗೆ ಮೊದಲ ರನ್ನರ್ ಅಪ್ ಆಗಿ ಉತ್ತರ ಪ್ರದೇಶದ ತಾನ್ಯಾ ಶರ್ಮಾ, ಎರಡನೇ ರನ್ನರ್ ಅಪ್ ಆಗಿ ಹರ್ಯಾಣದ ಮೆಹಕ್ ಧಿಂಗ್ರಾ ಹಾಗೂ ಮೂರನೇ ರನ್ನರ್ ಅಪ್ ಆಗಿ ಅಮಿಶಿ ಕೌಶಿಕ್ ನಗು ಬೀರಿದ್ದಾರೆ.
ರಾಜಸ್ಥಾನದ ಶ್ರೀಗಂಗಾನರದ ಮಣಿಕಾ ಪ್ರಸ್ತುತ ದೆಹಲಿಯಲ್ಲಿ ನೆಲೆಸಿದ್ದಾರೆ. ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಅವರು ಶಿಕ್ಷಣದ ಜೊತೆ ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅಲ್ಲದೇ ಮಣಿಕಾ ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ಆಯೋಜಿಸಲಾದ ಬಿಮ್ ಸ್ಟೆಕ್ ಸೆವೊಕಾನ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.