ಏರ್ ಇಂಡಿಯಾ ವಿಮಾನದಲ್ಲಿ ದೋಷಗಳ ಸರಣಿ ಹೆಚ್ಚುತ್ತಿದೆ. ಅಹಮದಾಬಾದಲ್ಲಿ ವಿಮಾನ ಪತನಗೊಂಡ ಬಳಿಕ ಹಲವು ತಾಂತ್ರಿಕ ದೋಷಗಳ ಕಾರಣ ನೀಡಿ ವಿಮಾನ ಹಾರಾಟ ರದ್ದು ಮಾಡಿದ ಪ್ರಸಂಗ ನಡೆದಿದೆ. ಇದೀಗ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಅಸ್ವಸ್ಥತೆ ಕಾಡಿದ್ದು, ವಿಷಾಹಾರ ಸೇವನೆಯೇ ಘಟನೆಗೆ ಕಾರಣ ಎನ್ನಲಾಗಿದೆ.
ಲಂಡನ್‌ನ ಹೀಥ್ರೂನಿಂದ ಮುಂಬೈಗೆ ಸೋಮವಾರ ಹೊರಟಿದ್ದ ಏರ್ ಇಂಡಿಯಾ ವಿಮಾನ AI-130 ರಲ್ಲಿ ಐವರು ಪ್ರಯಾಣಿಕರು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿಗೆ ತಲೆತಿರುಗುವಿಕೆ ಮತ್ತು ವಾಕರಿಕೆಯಂತಹ ಲಕ್ಷಣಗಳಿಂದ ಅಸ್ವಸ್ಥಗೊಂಡಿರುವುದಾಗಿ ವರದಿಯಾಗಿದೆ.
ವಿಷಾಹಾರ ಸೇವನೆಯೇ ಇದಕ್ಕೆ ಕಾರಣ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಶಂಕಿಸಿದ್ದಾರೆ. ಈ ಘಟನೆಯ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದೆ.
“ಲಂಡನ್ ಹೀಥ್ರೂದಿಂದ ಮುಂಬೈಗೆ ಹೊರಟಿದ್ದ AI-130 ವಿಮಾನದಲ್ಲಿ, ಐದು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗೆ ಹಾರಾಟದ ವಿವಿಧ ಹಂತಗಳಲ್ಲಿ ತಲೆತಿರುಗುವಿಕೆ ಮತ್ತು ವಾಕರಿಕೆ ಬಂದಿರುವುದಾಗಿ ವರದಿಯಾಗಿದೆ. ವಿಮಾನವು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಯಿತು. ಅಲ್ಲಿ ವೈದ್ಯಕೀಯ ತಂಡಗಳು ತಕ್ಷಣದ ನೆರವು ನೀಡಲು ಸಿದ್ಧವಾಗಿದ್ದವು. ವಿಮಾನ ಇಳಿದ ನಂತರ, ಇಬ್ಬರು ಪ್ರಯಾಣಿಕರು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ ಅಸ್ವಸ್ಥರಾಗಿದ್ದರಿಂದ ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ವೈದ್ಯಕೀಯ ಕೋಣೆಗೆ ಕರೆದೊಯ್ಯಲಾಯಿತು ಮತ್ತು ನಂತರ ಬಿಡುಗಡೆ ಮಾಡಲಾಯಿತು” ಎಂದು ಏರ್ ಇಂಡಿಯಾ ಸೋಮವಾರ ರಾತ್ರಿ ತಿಳಿಸಿದೆ.
ಏಳು ವ್ಯಕ್ತಿಗಳಿಗೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡಿರುವುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.