ಒಂದೇ ಕುಟುಂಬದ 7 ಮಂದಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರೆಲ್ಲರೂ ಡೆಹ್ರಾಡೂನ್ ನಿವಾಸಿಗಳೆಂದು ತಿಳಿದುಬಂದಿದೆ.
ಹರಿಯಾಣದ ಪಂಚಕುಲದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಪೊಲೀಸರ ಮಾಹಿತಿಯಂತೆ ಸೋಮವಾರ ತಡರಾತ್ರಿ ಸೆಕ್ಟರ್ 27 ರಲ್ಲಿ ಒಂದೇ ಕುಟುಂಬದ ಏಳು ಮಂದಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ತಿಳಿದ ತಕ್ಷಣ, ಡಿಪಿ ಹಿಮಾದ್ರಿ ಕೌಶಿಕ್ ಮತ್ತು ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಏಳು ಜನರನ್ನು ತಕ್ಷಣವೇ ಸೆಕ್ಟರ್ 26 ರಲ್ಲಿರುವ ಓಜಾಸ್ ಆಸ್ಪತ್ರೆಗೆ ಕರೆತಂದಿದ್ದಾರೆ ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಎಲ್ಲ ಏಳು ಮಂದಿಯೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರೆಲ್ಲರೂ ಡೆಹ್ರಾಡೂನ್ ನಿವಾಸಿಗಳು ಎಂದು ತಿಳಿದುಬಂದಿದ್ದು ಮೃತರಲ್ಲಿ ಪ್ರವೀಣ್ ಮಿತ್ತಲ್, ಅವರ ತಂದೆ ದೇಶರಾಜ್ ಮಿತ್ತಲ್, ತಾಯಿ ಮತ್ತು ಪತ್ನಿ ಹಾಗೂ ಮೂವರು ಮಕ್ಕಳು (ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ) ಸೇರಿದ್ದಾರೆ. ಪೊಲೀಸರ ಆರಂಭಿಕ ತನಿಖೆಯಲ್ಲಿ ಈ ಕುಟುಂಬವು ಮೂಲತಃ ಉತ್ತರಾಖಂಡದವರಾಗಿದ್ದು, ಪಂಚಕುಲದಲ್ಲಿ ಬಾಡಿಗೆ ಮನೆಯಲ್ಲಿ ದೀರ್ಘಕಾಲ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೃತರ ಆಪ್ತರು ನೀಡಿದ ಮಾಹಿತಿಯಂತೆ ಪ್ರವೀಣ್ ಮಿತ್ತಲ್ ಅವರ ಕುಟುಂಬವು ಟ್ರಾವೆಲ್ಲಿಂಗ್ ಏಜೆನ್ಸಿ ನಡೆಸುತ್ತಿದ್ದರು ಇದರಿಂದ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದರು ಇದಾದ ಬಳಿಕ ಸಾಲದ ಸುಳಿಯಲ್ಲಿ ಕುಟುಂಬ ಸಿಲುಕಿತ್ತು ಎಂದು ಹೇಳಿದ್ದಾರೆ.
ಆರು ಮಂದಿ ಕಾರಿನೊಳಗೆ ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಈ ವೇಳೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಣೆ ಮಾಡುತ್ತಿರುವ ವೇಳೆ ಓರ್ವ ಮನೆಯ ಒಳಗಿಂದ ಅಸ್ವಸ್ಥಗೊಂಡು ಮನೆಯ ಹೊರಗೆ ಬಂದಿದ್ದು ಅವರನ್ನು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಅಲ್ಲದೆ ಕಾರಿನಲ್ಲಿದ್ದ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಪರಿಶೀಲಿಸಿದ ವೈದ್ಯರು ಎಲ್ಲರೂ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದ್ದು. ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿ ಘಟನೆ ನಡೆದ ಸ್ಥಳದಿಂದ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹಿಮಾದ್ರಿ ಕೌಶಿಕ್ ಹೇಳಿದ್ದಾರೆ.
ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಪಂಚಕುಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಖರ ಮಾಹಿತಿ ಸಿಗಲಿದೆ ಎಂದಿದ್ದಾರೆ.