ನವದೆಹಲಿ: ಮಂಗಳವಾರ ಪಹಲ್ಲಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಸಂಪುಟ ಸಮಿತಿ ಸಭೆ ನಡೆದಿದ್ದು ಈ ವೇಳೆ ಭಾರತ ಸರ್ಕಾರ ಕೆಲವೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಉಗ್ರ ದಾಳಿಯ ಹೊಣೆಯನ್ನು ‘ಕಾಶ್ಮೀರ್ ರೆಸಿಸ್ಟೆನ್ಸ್’ ಹೊತ್ತುಕೊಂಡಿದ್ದು, ಇದು ಪಾಕಿಸ್ತಾನದ ಲಷ್ಕರ್-ಎ-ತೊಯ್ದಾ ದ ಅಂಗ ಸಂಸ್ಥೆಯಾಗಿದ್ದು ಅದರಂತೆ ಬುಧವಾರ ನಡೆದ ಸಂಪುಟ ಸಮಿತಿ ಸಭೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟನ್ನು ನೀಡಲು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಅವುಗಳೆಂದರೆ.
ಅಟ್ಟಾರಿ – ವಾಘಾ ಗಡಿ ಸೇರಿದಂತೆ ಅಂತರರಾಷ್ಟ್ರೀಯ ಗಡಿಯನ್ನು ಶಾಶ್ವತವಾಗಿ ಮುಚ್ಚುವುದು.
ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸುವುದು.
ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಪ್ರವೇಶ ನಿರ್ಬಂಧ, ಈಗಾಗಲೇ ಭಾರತಕ್ಕೆ ಬಂದಿರುವ ಪಾಕ್ ಪ್ರಜೆಗಳು ದೇಶ ತೊರೆಯಲು 48 ಗಂಟೆಗಳ ಗಡುವು.
ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರಿಗೆ ಭಾರತದಿಂದ ನಿರ್ಗಮಿಸಲು ಒಂದು ವಾರದ ಗಡುವು ನೀಡಿದೆ. ಹಾಗೆಯೇ ಭಾರತವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ರಕ್ಷಣಾ, ನೌಕಾಪಡೆ ಮತ್ತು ವಾಯು ಸಲಹೆಗಾರರನ್ನು ವಾಪಾಸ್ ಕರೆಸಿಕೊಳ್ಳಲಿದೆ.
ಪಾಕಿಸ್ತಾನ ಹೈಕಮಿಷನ್ ಬಲವನ್ನು 55 ರಿಂದ 30 ಕ್ಕೆ ಇಳಿಸಲಾಗುವುದು, ಮೇ1 ರ ವೇಳೆಗೆ ಇದು ಜಾರಿಗೆ ಬರಲಿದೆ.
ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್ ದೋವಲ್ ಸಹಿತ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.