Friday, November 22
Share News

ನವದೆಹಲಿ: ರಾಜ್ಯಸಭೆಗೆ ನಾಮಕರಣಗೊಂಡಿರುವ ಇನ್ಫೋಸಿಸ್‌ ಸಂಸ್ಥಾಪಕಿ, ಉದಾರ ದಾನಿ, ಸಾಹಿತಿ, ಕನ್ನಡತಿ ಸುಧಾ ಮೂರ್ತಿ ಅವರು ರಾಜ್ಯಸಭೆ ಸದಸ್ಯರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು ಅತ್ಯಂತ ಸುಂದರ ಭಾಷೆಯಾದ, ಸೊಗಡಿನ ಭಾಷೆಯಾದ ಕನ್ನಡದಲ್ಲೇ ಪ್ರತಿಜ್ಞಾ ವಿಧಿಯನ್ನು ಓದುವ ಮೂಲಕ ಮೆಚ್ಚುಗೆ ಗಳಿಸಿದರು.

ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್‌ ಧನಕರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಪಿಯೂಷ್‌ ಗೋಯಲ್‌ ಅವರು ಉಪಸ್ಥಿತರಿದ್ದರು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಇನ್ಫೋಸಿಸ್‌ ಸ್ಥಾಪನೆಯಲ್ಲಿ ಜತೆಯಾಗಿದ್ದ, ಸುಧಾಮೂರ್ತಿ ಅವರ ಜೀವನ ಸಂಗಾತಿ ಎನ್‌.ಆರ್‌. ನಾರಾಯಣ ಮೂರ್ತಿ ಅವರು ಕೂಡಾ ಇದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಧಾ ಮೂರ್ತಿ ಅವರನ್ನು ರಾಜ್ಯಸಭೆ ನಾಮಕರಣ ಮಾಡಲಾಗಿರುವ ಸಂಗತಿಯನ್ನು ಖುಷಿಯಿಂದ ಹಂಚಿಕೊಂಡಿದ್ದರು.

“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀಮತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಿಮ್ಮ ಜತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಸಮಾಜಸೇವೆ, ಪರೋಪಕಾರ, ಶಿಕ್ಷಣಕ್ಕೆ ಕೊಡುಗೆ ಸೇರಿ ಹಲವು ದಿಸೆಯಲ್ಲಿ ಸುಧಾ ಮೂರ್ತಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಅವರ ಉಪಸ್ಥಿತಿಯು ನಾರಿಶಕ್ತಿಯ ದ್ಯೋತಕವಾಗಿರಲಿದೆ. ಹಾಗೆಯೇ, ಸಂಸತ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಸುಧಾ ಮೂರ್ತಿ ಅವರಿಗೆ ಶುಭವಾಗಲಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.


Share News

Comments are closed.

Exit mobile version