ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಈಗಾಗಲೇ ಬಿಡುಗಡೆಗೊಳಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ಹೊಸ ಮುಖವನ್ನು ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಸೇನಾನಿ , ಸಂಘ ಪರಿವಾರದ ಹಿನ್ನಲೆಯುಳ್ಳ, ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಪಾಲಿಗೆ ಈ ಬಾರಿ ಟಿಕೆಟ್ ದೊರಕಿದ್ದು ಅಧಿಕೃತ ಘೋಷಣೆ ಆಗುತ್ತಿದಂತೆಯೇ ಮೊದಲು ಕದ್ರಿಯಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ದೇಶಕ್ಕಾಗಿ ಪರಮೋಚ್ಚ ಬಲಿದಾನ ನೀಡಿದ ವೀರ ಯೋಧರಿಗೆ ನಮನ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ನಂತರ ಸಂಘ ನಿಕೇತನಕ್ಕೆ ತೆರಳಿ ಡಾಕ್ಟರ್ ಜೀ ಅವರ ಭಾವಚಿತ್ರಕ್ಕೆ ನಮಿಸಿ ಆಶೀರ್ವಾದ ಪಡೆದು, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದರು. ಬ್ರಿಜೇಶ್ ಚೌಟರನ್ನು ಸಂಸದರು ಅಭಿನಂದಿಸಿ ಸಿಹಿ ತಿನಿಸುವ ಮೂಲಕ ಶುಭ ಹಾರೈಸಿದರು.
ಹೊಸ ಜನಪ್ರತಿನಿಧಿ ಈ ಕ್ಯಾಪ್ಟನ್!
ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಪೈಕಿ ರಾಜ್ಯದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾಗೆ ಟಿಕೆಟ್ ಘೋಷಣೆ ಮಾಡಿದ್ದು, ಇವರು ಕೂಡ ಹೊಸಬರಾಗಿದ್ದಾರೆ.
ಕ್ಯಾಪ್ಟನ್ ಬ್ರಿಜೇಶ್ ಚೌಟಾ ಹಿನ್ನೆಲೆ:
ಈ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟಾಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ನೇಮಿಸಿತ್ತು.
ತಮ್ಮ ಕಾಲೇಜು ವರ್ಷಗಳಲ್ಲಿ ಎನ್‌ಸಿಸಿನಲ್ಲಿ ನಾಯಕತ್ವಕ್ಕಾಗಿ ಹೆಸರುವಾಸಿಯಾದ ಚೌಟಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಮಿಲಾಗ್ರೆಸ್ ಶಾಲೆಯಲ್ಲಿ ಪಡೆದರು ಮತ್ತು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಪಿಯು ಮತ್ತು ಬಿಎಸ್‌ಸಿಯನ್ನು ಪೂರ್ಣಗೊಳಿಸಿದರು.
ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಾ, ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM)ನಲ್ಲಿ ವ್ಯಾಸಂಗ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಎನ್‌ಸಿಸಿಯಲ್ಲಿ ಅತ್ಯುತ್ತಮ ಕೆಡೆಟ್ ಆಗಿ ಗುರುತಿಸಿಕೊಂಡಿದ್ದು, ನವದೆಹಲಿ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ.
ಪದವಿಯ ನಂತರ, ಕ್ಯಾಪ್ಟನ್ ಚೌಟಾ ಅವರು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್ (CDSE) ಅನ್ನು ಉತ್ತೀರ್ಣರಾದರು ಮತ್ತು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ತರಬೇತಿ ಪಡೆದರು. ಅವರು ಪ್ರತಿಷ್ಠಿತ 8 ಗೂರ್ಖಾ ರೈಫಲ್ಸ್‌ನ 7ನೇ ಬೆಟಾಲಿಯನ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅಲ್ಲದೆ ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ವಿವಿಧ ಪ್ರದೇಶಗಳಿಗೆ ಉತ್ತಮ ಕೊಡುಗೆ ನೀಡಿದ್ದಾರೆ.
ಬಳಿಕ ಸ್ವಯಂ ನಿವೃತ್ತಿಯ ನಂತರ 2011ರಲ್ಲಿ ತನ್ನ ಸ್ವಗ್ರಾಮಕ್ಕೆ ಹಿಂದಿರುಗಿದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಮತ್ತು ಬಿಜೆಪಿಯೊಂದಿಗೆ ಸೇರಿಕೊಂಡರು. 2013ರಲ್ಲಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು 2016ರಿಂದ 2019 ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದರು.
ಕ್ಯಾಪ್ಟನ್ ಚೌಟಾ ಅವರು ಬರೀ ರಾಜಕೀಯ ಅಲ್ಲದೆ ಇದನ್ನು ಮೀರಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳದ ನಿಷೇಧದ ವಿರುದ್ಧದ ಪ್ರತಿಭಟನೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ಮಂಗಳೂರು ಕಂಬಳವನ್ನು ಸತತ ಆರು ವರ್ಷಗಳಿಂದ ಆಯೋಜಿಸಿದ್ದು, ಸ್ಥಳೀಯ ಸಂಪ್ರದಾಯಗಳಿಗೆ ಹೆಚ್ಚು ಒತ್ತು ನೀಡಿದ ಹೆಗ್ಗಳಿಗೆ ಇವರದ್ದಾಗಿದೆ.
ತನ್ನ ಕಾಯಕದಲ್ಲೇ ತೊಡಗಿಸಿಕೊಂಡಿರುವ ಬ್ರಿಜೇಶ್ ಚೌಟಾ ಅವರು ತಮ್ಮ ಸಾಮಾಜಿಕ ಕಾಯಕಕ್ಕಾಗಿ ಅವಿವಾಹಿತರಾಗಿಯೇ ಉಳಿದುಕೊಂಡಿದ್ದಾರೆ.