ಪುತ್ತೂರು: ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿಯನ್ನು ಪಡೆದು ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಸಿಬ್ಬಂದಿ ನೇಮಕಾತಿ ಆಯೋಗದ ಜನರಲ್ ಡ್ಯೂಟಿ ಹುದ್ದೆಯ ಲಿಖಿತ ಪರೀಕ್ಷೆಯಲ್ಲಿ ಲಹರಿ ಕೆ ಅವರು ಉತ್ತೀರ್ಣರಾಗಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ದೈಹಿಕ ಸದೃಢತಾ ಪರೀಕ್ಷೆಗೆ ಲಹರಿ ಕೆ. ಆಯ್ಕೆಗೊಂಡಿದ್ದು, ಅವರ ಸಾಧನೆಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, SSC-GD ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಆಗಸ್ಟ್ ತಿಂಗಳಿನಲ್ಲಿ ದೈಹಿಕ ಸದೃಢತೆಯ ಪರೀಕ್ಷೆಯು ನಡೆಯಲಿದ್ದು, ಇದರ ಸಲುವಾಗಿ ಉಚಿತ ಮೈದಾನ ತರಬೇತಿಯನ್ನು ವಿ. ಅಕಾಡೆಮಿ ನೀಡಲಿದೆ ಎಂದು ಘೋಷಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ 25ಕ್ಕೂ ಅಧಿಕ ಅಭ್ಯರ್ಥಿಗಳು ಅಗ್ನಿಪಥ್ ನೇಮಕಾತಿಯಲ್ಲಿ ಹಾಗೂ ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆ ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದನ್ನು ಅವರು ಸ್ಮರಿಸಿಕೊಂಡರು.
ಮೂಲತಃ ವಿಟ್ಲದ ಕುಳದವರಾದ ಸೂರ್ಯನಾರಾಯಣ ಎಚ್ ಆರ್ ಮತ್ತು ಲತಾ ಪಿ ದಂಪತಿಗಳ ಪುತ್ರಿ ಇವರು. ಪ್ರಸ್ತುತ ಪುತ್ತೂರಿನ ವಾಸ್ತಲ್ಯ ಹೌಸ್ ಕಲ್ಲೇಗ, ನೆಹರು ನಗರದ ನಿವಾಸಿಯಾದ ಇವರು ಕೆನರಾ ಕಾಲೇಜ್ ಮಂಗಳೂರು ಇಲ್ಲಿ ಇಂಜಿನಿಯರಿಂಗ್ ಪದವಿ (E/C)ಯನ್ನು ಪಡೆದಿರುತ್ತಾರೆ.
ಏನಿದು SSC-GD:
ಎಸ್ ಎಸ್ ಸಿ GD ನೇಮಕಾತಿ ಪರೀಕ್ಷೆ ರಾಷ್ಟ್ರೀಯ ಮಟ್ಟದ ಸಶಸ್ತ್ರ ಪಡೆಗಳಿಗೆ ನೇಮಕ ಮಾಡಲಿರುವ ಪರೀಕ್ಷೆ. ಇದರಲ್ಲಿ ಉತ್ತೀರ್ಣರಾದವರು ಈ ಕೆಳಗಿನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆದುಕೊಳ್ಳುತ್ತಾರೆ: ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF), ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF ), ಸಶಸ್ತ್ರ ಸೀಮಾ ಬಲ್ (SSB), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF), ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ITBP),ಅಸ್ಸಾಂ ರೈಫಲ್ಸ್ (AR), ನರೋಟಿಕ್ಸ್ ಕಂಟ್ರೋಲ್ ಬ್ಯುರೋ (NCB), ಸೆಕ್ರೆಟ್ರಿಯೇಟ್ ಸೆಕ್ಯುರಿಟಿ ಫೋರ್ಸ್ (SSF).