Thursday, November 21
Share News

ನಿರೂಪಣೆ: ಗಣೇಶ್ ಎನ್. ಕಲ್ಲರ್ಪೆ
ಗಡಿಯಲ್ಲಿ ಹೋರಾಡುವುದಕ್ಕಿಂತಲೂ ಬಲು ಘೋರ, ದೇಶದೊಳಗಿನ ಶತ್ರುಗಳ ವಿರುದ್ಧದ ಹೋರಾಟ. ವಿರೋಧಿ ದೇಶದ, ಉಗ್ರ ಬಣಗಳು ದೇಶದೊಳಗಡೆ ವಿಧ್ವಂಸಕ ಕೃತ್ಯ ಎಸಗಲು ದೇಶದೊಳಗಿರುವ ತಮ್ಮ ಜನರನ್ನೇ ಬಳಸಿಕೊಳ್ಳುತ್ತಾರೆ. ಅವರ ಮೂಲಕ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ದುಷ್ಟರನ್ನು ಮಟ್ಟ ಹಾಕಲು ಸೈನ್ಯದೊಳಗಿನ ವ್ಯವಸ್ಥೆಯೇ ಇಂಟೆಲಿಜೆನ್ಸ್.

ಬುದ್ಧಿಯ ಚಾತುರ್ಯ, ಶತ್ರುವಿನ ಬಳಿಯಿದ್ದುಕೊಂಡೇ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ, ಹದ್ದಿನ ಕಣ್ಣು, ಸಾಕಷ್ಟು ಭಾಷೆಗಳ ಮೇಲೆ ಹಿಡಿತ, ಉತ್ತಮ ಸಾರ್ವಜನಿಕ ಸಂಪರ್ಕ ಹೀಗೆ ಇಂಟೆಲಿಜೆನ್ಸ್’ನಲ್ಲಿ ಕಾರ್ಯತತ್ಪರನಾದ ಸೈನಿಕ ಸಾಕಷ್ಟು ಕೌಶಲ್ಯಗಳನ್ನು ರೂಢಿಸಿಕೊಂಡಿರಬೇಕು.

ಭಾರತದ ಬಲಿಷ್ಠ ಇಂಟೆಲಿಜೆನ್ಸ್ ವ್ಯವಸ್ಥೆಯಲ್ಲಿ ದೇಶಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ದುಡಿಯುತ್ತಿರುವ ಸೈನಿಕರಲ್ಲಿ ಓರ್ವರು ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರೇ ಆದ ಸುಧೀರ್ ಶೆಟ್ಟಿ.

ಒಂದು ಕೈಯಲ್ಲಿ ಲೇಖನಿ, ಇನ್ನೊಂದು ಕೈಯಲ್ಲಿ ಗನ್ ಹಿಡಿದುಕೊಂಡು ದೇಶ ಸೇವೆಯಲ್ಲಿ ತೊಡಗಿಕೊಂಡಿರುವ ಸುಧೀರ್ ಶೆಟ್ಟಿ ಅವರು ಈ ಲೇಖನದ ನಾಯಕ. ಹಾಗಾಗಿ ಅವರೇ ನಿಮ್ಮ ಜೊತೆ ಅಕ್ಷರ ಮಾತುಗಳಿಗೆ ಶುರು ಮಾಡುತ್ತಾರೆ.

ಉಗ್ರ ಕಮಾಂಡೆಂಟ್’ನ ತಮ್ಮನನ್ನು ಸೆರೆ ಹಿಡಿದದ್ದೇ ರೋಚಕ

2011ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಸೈನಿಕರ ನೇಮಕಾತಿಯಲ್ಲಿ ಸಹಪಾಠಿಗಳಾದ ಸನತ್ ಕುಮಾರ್, ಪ್ರಶಾಂತ್ ಶೆಟ್ಟಿ ಜೊತೆ ಪಾಲ್ಗೊಂಡಿದ್ದೆ. ಬಳಿಕ ಸೈನ್ಯಕ್ಕೆ ನೇಮಕಗೊಂಡು, ತರಬೇತಿ ಆರಂಭ. ಮಹಾರಾಷ್ಟ್ರದ ಅಹಮದ್ ನಗರದಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ಡಿ.ಪಿ.ಐ.ಆರ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪುಣೆ ಹಾಗೂ ಬೆಂಗಳೂರಿನಲ್ಲಿ ತರಬೇತಿ ಪಡೆದುಕೊಂಡರು. ಇದಾಗಿ 2013ರಲ್ಲಿ ಹರಿಯಾಣದಲ್ಲಿ ಮೊದಲ ನಿಯುಕ್ತಿ. 2016ರ ಜನವರಿಯಿಂದ ಕಾಶ್ಮೀರದ ಬಾರಾಮುಲ್ಲಾದಲ್ಲಿ ಗುಪ್ತಚರ ವಿಭಾಗದಲ್ಲಿ ಕೆಲಸ. 2020ರಲ್ಲಿ ಹೈದರಾಬಾದ್’ಗೆ, 2022ರಲ್ಲಿ ಅಸ್ಸಾಂನಲ್ಲಿ ಕರ್ತವ್ಯ.

7 sister’s state. ಭಾರತದ ಈಶಾನ್ಯ ರಾಜ್ಯಗಳು ಇವು. ಈ 7 sister’s stateಗಳಲ್ಲಿ ಅಸ್ಸಾಂ ಒಂದು. ಭಾರತದ ಈ ಈಶಾನ್ಯ ರಾಜ್ಯಗಳು ಪಕ್ಕದ ಮಯನ್ಮಾರ್ ಅಥವಾ ಬರ್ಮಾದೊಂದಿಗೆ ಗಡಿ ಹಂಚಿಕೊಂಡಿದೆ. ಹೇಳಿ ಕೇಳಿ ಒಂದು ಬೇಲಿಯೂ ಇಲ್ಲದ ಪ್ರದೇಶ. ಇಲ್ಲಿರುವ ದಟ್ಟ ಕಾಡುಗಳೇ ಗಡಿ ಎಂದು ಹೇಳಬಹುದು. ಆದರೆ ಈ ಕಾಡು ಮಯನ್ಮಾರ್’ನ ಸೊತ್ತು.

ಮಯನ್ಮಾರ್ ಸೈನಿಕ ಆಡಳಿತದ ತೆಕ್ಕೆಯಲ್ಲಿದೆ. ಹಾಗಾಗಿ ಈ ಗೊಂಡಾರಣ್ಯವೇ ಉಗ್ರರ ಭದ್ರ ನೆಲೆ. ಇಲ್ಲಿದ್ದುಕೊಂಡು ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿರುತ್ತಾರೆ. ಇಲ್ಲಿರುವ ಉಗ್ರ ಗುಂಪುಗಳಲ್ಲಿ ಬಲಿಷ್ಠವಾಗಿರುವುದು ಎನ್.ಎಸ್.ಸಿ.ಎನ್.(ಕೆ.ವೈ). ಇದರ ಮುಖ್ಯಸ್ಥ ಯೊಂಗ್ವಾಂಗ್. ಈತನ ಸಹೋದರ ಮರ್ಮಿಟ್.

ಅಸ್ಸಾಂನಲ್ಲಿ ಮರ್ಮಿಟ್ ಬಹಳ ಹೆಸರು ಪಡೆದುಕೊಂಡಿರುವ ವ್ಯಕ್ತಿ. ಗುತ್ತಿಗೆದಾರ ಎಂಬ ಪರವಾನಿಗೆ ಪಡೆದುಕೊಂಡು, ಉಗ್ರಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಆತ ಉಗ್ರರ ನೆರವಿಗೆ ನಿಂತವ ಎಂಬ ಸುಳಿವು ಜನಸಾಮಾನ್ಯರಿಗೆ ಇಲ್ಲವೇ ಇಲ್ಲ. ಆದರೆ ಈ ವಿಚಾರವನ್ನು ನಾವು ಖಾತ್ರಿ ಪಡಿಸಿಕೊಂಡೆವು.

ಸರಿರಾತ್ರಿ 12 ಗಂಟೆ ಸುಮಾರಿಗೆ ನನಗೆ ಕರೆ ಬಂತು. ಮುಂಜಾನೆ 6 ಗಂಟೆ ಹೊತ್ತಿಗೆ ಮರ್ಮಿಟ್ ಬರುತ್ತಾನೆ ಎಂದು. ನನ್ನ ಸಂಪರ್ಕ ಬಳಸಿಕೊಂಡು, ಆತನ ಸಂಪರ್ಕ ಸಂಖ್ಯೆ ತೆಗೆದುಕೊಂಡೆ.

ನಾನು ಹಾಗೂ ನನ್ನ ಬಾಸ್ ಇಬ್ಬರೇ 150 ಕಿ.ಮೀ. ದೂರದ ದಿಬ್ರುಗಢ ಏರ್’ಪೋರ್ಟಿಗೆ ರಾತ್ರಿಯೇ ಪ್ರಯಾಣ ಬೆಳೆಸಿದೆವು. 3 ಗಂಟೆ ಸುಮಾರಿಗೆ ನಾವು ಏರ್’ಪೋರ್ಟ್ ತಲುಪಿದೆವು. ಅಲ್ಲಿನ ಪೊಲೀಸರ ಜೊತೆ ಮಾತುಕತೆಯೂ ನಡೆಯಿತು.

ನಮಗೆ ಬಂದ ಮಾಹಿತಿಗೆ ಮುನ್ನವೇ ಅಂದರೆ 5.30ಕ್ಕೆ ಆತ ಬಂದಿಳಿದ ಎನ್ನುವ ಸುಳಿವು ಸಿಕ್ಕಿತು. ಇದರಲ್ಲಿ ಓರ್ವನನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಾಯಿತು. ಆದರೆ ಮರ್ಮಿಟ್ ಆಗಲೇ ಅಲ್ಲಿಂದ ತೆರಳಿ ಆಗಿತ್ತು. ಆತನ ಮೊಬೈಲ್ ನಂಬರ್ ಟ್ರೇಸ್ ಮಾಡಿ, ಲೊಕೇಶನ್ ನೋಡಿದರೆ – ಆಗಲೇ ಆತ ನಮ್ಮಿಂದ 140 ಕಿ.ಮೀ. ದೂರದಲ್ಲಿದ್ದ.

ನಾನು ಹಾಗೂ ನನ್ನ ಬಾಸ್ ಆತನನ್ನು ಬೆನ್ನತ್ತಿದೆವು. ಲೇಖಪಾನಿಯಲ್ಲಿದ್ದ ಸೈನಿಕರಿಗೂ ಮಾಹಿತಿ ರವಾನಿಸಲಾಯಿತು. ಆತನ ಲೊಕೇಶನ್ ಒಂದು ಬಿಟ್ಟರೆ ಬೇರೆ ಯಾವುದೇ ಮಾಹಿತಿ ನಮ್ಮಲ್ಲಿಲ್ಲ. ಕೊನೆ ಪಕ್ಷ ಆತನೊಂದಿಗೆ ಎಷ್ಟು ಮಂದಿ ಇದ್ದಾರೆ ಎನ್ನುವುದೂ ತಿಳಿಯದು.

ಲೇಖಪಾನಿಗೆ ಮರ್ಮಿಟ್ ತಲುಪುತ್ತಿದ್ದಂತೆ ನಾವು ತಲುಪಿದೆವು. ಅಲ್ಲಿ ಮರ್ಮಿಟ್’ನ ಬಂಧನವಾಯಿತು. ಆತನ ಸಹಿತ ಒಟ್ಟು 3 ಮಂದಿ ಇದ್ದರು.

ಆ ಮೂವರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆಗೆ ಒಳಪಡಿಸಲಾಯಿತು. ಉಗ್ರ ಕೃತ್ಯದ ಬೇರುಗಳನ್ನು ತುಂಡರಿಸುವ ಕೆಲಸವನ್ನು ಸೈನ್ಯ ಮಾಡಿತು.

ಮರ್ಮಿಟ್’ನ ಬಂಧನವಾಗುತ್ತಿದ್ದಂತೆ ನನಗೆ, ಆತನ ಸಹೋದರ ಉಗ್ರ ಗುಂಪಿನ ಕಮಾಂಡೆಂಟ್’ನಿಂದ ಬೆದರಿಕೆ ಸಂದೇಶವೂ ಬಂದಿತು. ಸಂದೇಶಕ್ಕೆ ಪ್ರತಿ ಸಂದೇಶವನ್ನು ಕಳುಹಿಸಿದೆ. ಬೆದರಿಸುವವನು ಇಲಿಯಂತೆ ಬರ್ಮಾದಲ್ಲಿ ಅಡಗಿ ಕುಳಿತಿದ್ದಾನೆ. ಧೈರ್ಯವಿದ್ದರೆ ಭಾರತಕ್ಕೆ ಬರುವಂತೆ ಸವಾಲು ಹಾಕಿದ್ದೇನೆ.

ನಾಯಿಯಿಂದ ಪ್ರಾಣ ಉಳಿಸಿಕೊಂಡೆವು; ಆದರೂ ಇಬ್ಬರನ್ನು ಕಳೆದುಕೊಂಡೆವು

ಲಷ್ಕರ್-ಎ-ತಯ್ಯಬಾ ಕಮಾಂಡರ್ ಮೊಹಮ್ಮದ್ ಷಾ ಪಾಕಿಸ್ಥಾನದಲ್ಲಿ ಹತ್ಯೆಯಾದ ಬಗ್ಗೆ ಸುದ್ದಿಯಾಗಿತ್ತು. ಮರುದಿನ ಈತ ಬಂಡಿಪೊರಾದಲ್ಲಿ ಬೈಕ್ ರ್ಯಾಲಿ ಮಾಡಿ ತಾನು ಬದುಕಿದ್ದೇನೆ ಎಂದು ತೋರಿಸಿಕೊಂಡಿದ್ದ.

ಇಂತಹ ಉಗ್ರ ಹಾಜನ್ ಎಂಬಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿರುವ ಮಾಹಿತಿ ತಿಳಿಯಿತು. ರಾತ್ರಿ ಹೊತ್ತು ದಾಳಿಗೆ ಯೋಜನೆ ರೂಪಿಸಲಾಯಿತು. ಅಷ್ಟೊತ್ತಿಗೆ ಆತ ಪಕ್ಕದ ಮನೆಗೆ ವಾಸ ಬದಲಿಸಿದ. ಸೇನೆ ದಾಳಿ ನಡೆಸುತ್ತಲೇ ಉಗ್ರರು ಹಿಂದಿನಿಂದ ದಾಳಿ ನಡೆಸಿದರು.

ಒಂದು ಹಂತದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಗುಪ್ತಚರ ವಿಭಾಗದಲ್ಲಿದ್ದರೂ, ನಾವು ಜತೆಗೆ ಇದ್ದೇವು. ಪಕ್ಕದಲ್ಲೇ ಇದ್ದ ಒಂದು ಡಬ್ಬಿ ಶೀಟಿನ ಹಿಂದೆ ಸರಿದೆವು. ಅಷ್ಟರಲ್ಲಿ ತಿಳಿದುಕೊಂಡ ಮಾಹಿತಿಯೇನೆಂದರೆ, ಉಗ್ರರು ಡಬ್ಬಿ ಶೀಟಿನ ಇನ್ನೊಂದು ಬದಿಯಲ್ಲಿದ್ದಾರೆಂದು. ಗುಂಡಿನ ಶಬ್ದ ಸ್ಪಷ್ಟವಾಯಿತು. ಉಗ್ರರು ನಮ್ಮ ಹಿಂದೆಯೇ ಗುರಿ ಇಟ್ಟು ಕಾಯುತ್ತಿದ್ದಾರೆ. ಅಷ್ಟರಲ್ಲಿ ಎಲ್ಲಿಂದಲೋ ಒಂದು ನಾಯಿ ಬೊಗಳುತ್ತಾ ಬಂದಿತು. ಕಕ್ಕಾಭಿಕ್ಕಿಯಾದ ಉಗ್ರರು, ಕಾಲ್ಕಿತ್ತರು. ಪಕ್ಕದ ಕಾಡಿನಲ್ಲಿ ಮರೆಯಾದರು.

ಘಟನೆಯಲ್ಲಿ ಮೂವರು ಸೈನಿಕರು ಹುತಾತ್ಮರಾದರು. ಇಬ್ಬರು ಉಗ್ರರನ್ನು ಹೊಡೆದುರುಳಿಸಿದರೂ ಕೂಡ ಕೂದಲೆಳೆಯಷ್ಟು ಮಾಹಿತಿ ವೈಫಲ್ಯದಿಂದಾಗಿ ನಮ್ಮವರನ್ನು ಕಳೆದುಕೊಂಡವು ಎಂಬ ಬೇಸರ ಸದಾ ಕಾಡುತ್ತಿದೆ.

ಸೋಪೋರ್ ರೋಚಕ ಕಾರ್ಯಾಚರಣೆ

ಸೋಪೋರ್ ತಾಲೂಕು, ಜಮ್ಮು ಕಾಶ್ಮೀರದ ಬಾರಾಮುಲ್ಲಾ ಪಟ್ಟನ್ ಜಿಲ್ಲೆಯಲ್ಲಿದೆ. ಇಲ್ಲಿನ ಜನರಿಗೆ ದೇಶಭಕ್ತಿ ಕಡಿಮೆ. ಉಗ್ರರ ಒಡನಾಟವೇ ಹೆಚ್ಚು. ಹಣಕ್ಕಾಗಿ ಕೆಲಸ ಮಾಡುತ್ತಾರೆ. ನಾವು ಇಂತಹ ವ್ಯಕ್ತಿಗಳನ್ನೇ ಆಯ್ದುಕೊಂಡು, ಅವರೊಂದಿಗಿದ್ದು ಕೆಲಸ ಮಾಡಬೇಕಾಗಿತ್ತು. ಅವರು ಕೊಡುವ ಮಾಹಿತಿ ಅದೆಷ್ಟು ನಿಖರ ಎನ್ನುವುದು ತಿಳಿಯದು. ಹಾಗಾಗಿ ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುವುದು ತೀರಾ ಅಗತ್ಯ. ಹೀಗೆ ಅವರೇ ನೀಡಿದ ಮಾಹಿತಿಯನ್ನು ಮುಂದಿಟ್ಟುಕೊಂಡು ಮೂರನ್ನು ಉಗ್ರರನ್ನು ಹೊಡೆದುರುಳಿಸಿದ್ದು ರೋಚಕವೇ ಸರಿ.

ಶ್ರೀನಗರದ ಹೆಚ್ಚಿನ ಪ್ರದೇಶಗಳಲ್ಲಿ ಹೆಸರು ಬದಲಿಸಿ, ವಾಹನ ನಂಬರ್ ಬದಲಿಸಿ ಓಡಾಟ ನಡೆಸಬೇಕು, ಮಾಹಿತಿ ಸಂಗ್ರಹಿಸಬೇಕು. ಹೊಸ ವಾಹನ ಬಂದರೆ ಸಾಕು, ಉಗ್ರರಿಗೆ ತಿಳಿದುಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಎರಡು ಮನೆಗಳಲ್ಲಿ ಮೂವರು ಉಗ್ರರನ್ನು ಪತ್ತೆ ಮಾಡಿ ಕಾರಾಚರಣೆ ದಳಕ್ಕೆ ತಿಳಿಸಲಾಯಿತು. ಬಳಿಕ ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಕಾಯಾಚರಣೆ ನಡೆಸಲಾಯಿತು ಎಂದು ಹೇಳುತ್ತಾರೆ ಸುಧೀರ್.

ಸಾಮಾಜಿಕ ಜಾಲತಾಣಗಳ ಪ್ರಭಾವ

ಹೀಗೆ ಉಲ್ಫಾ ಸಂಘಟನೆ ಸೇರಿದಂತೆ ಅದೇಷ್ಟೋ ಉಗ್ರರ ಹಿಂಬಾಲಕರನ್ನು ಸೆರೆ ಹಿಡಿದು, ಮನ ಪರಿವರ್ತಿಸುವ ಕೆಲಸವನ್ನು ಮಾಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣಗಳನ್ನು ಉಗ್ರರು ಬಳಸಿಕೊಂಡು, ಯುವಕರನ್ನು ಗುರಿಯಾಗಿಸಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದಾರೆ. ಅಸ್ಸಾಂನ ನಾಗಾ ಸಮುದಾಯ ಈಗಲೂ ಪ್ರಾಚೀನರಂತೆ ಬದುಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಸದುಪಯೋಗದ ಬಗ್ಗೆಯೂ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತಿದೆ.

ಸೇನೆ ಎಂದರೆ ಸಾವಲ್ಲ; ಸೇನೆ ಎಂದರೆ ಸೇವೆ

ಸೇನೆ ಎಂದಾಕ್ಷಣ ಹಲವರು ಸಾವು ಎಂದೇ ಅರ್ಥವಿಸಿಕೊಂಡಿದ್ದಾರೆ. ಆದರೆ ಇದು ತಪ್ಪು. ಸೇನೆ ಎಂದರೆ ಸೇವೆ ಎಂದಾಗಬೇಕು. ಹುಟ್ಟಿದ ಪ್ರತಿಯೋರ್ವರು ಸಾಯಲೇಬೇಕು. ಮನೆಯಲ್ಲಿ ಸುಮ್ಮನೆ ಕುಳಿತಿದ್ದವರಿಗೂ ಸಾವು ಬಂದ ನಿದರ್ಶನ ನಮ್ಮ ಮುಂದಿದೆ. ಇಂತಹದ್ದರಲ್ಲಿ ನಾವು ದೇಶಕ್ಕಾಗಿ ಸತ್ತರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಬೇರೆನೂ ಇದೆ ಹೇಳಿ.

ನಾನು ಬಡತನದಿಂದಲೇ ಬೆಳೆದವ. ಚಿಕ್ಕಂದಿನಲ್ಲೇ ತಂದೆ ವಿಶ್ವನಾಥ ಶೆಟ್ಟಿ ಅವರನ್ನು ಕಳೆದುಕೊಂಡೆ. ಮಾವನವರ ಬೆಂಬಲದಿಂದ ಕಾಲೇಜು ಮೆಟ್ಟಿಲು ಹತ್ತುವಂತಾಯಿತು. ಸ್ವಾವಲಂಭಿಯಾಗಿ ಬದುಕಬೇಕೆಂಬ ಛಲದಿಂದ ಕಾಲೇಜಿಗೆ ಹೋಗುತ್ತಲೇ ಅಡಿಕೆ ಸುಲಿಯಲು, ಕೃಷಿ ಕೆಲಸಕ್ಕೆಂದು ತೆರಳುತ್ತಿದ್ದೆ.

ಪೆರ್ನೆ ಮಜೀದಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪೆರ್ನೆ ಶ್ರೀ ರಾಮಚಂದ್ರ ಕಾಲೇಜಿನಲ್ಲಿ ಪ್ರೌಢಶಿಕ್ಷಣ, ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದುಕೊಂಡೆ. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ಸೈನ್ಯಕ್ಕೆ ಸೇರ್ಪಡೆಗೊಂಡೆ. ನನ್ನ ಅಣ್ಣ ಸುಜಿತ್ ಕುಮಾರ್ ಶೆಟ್ಟಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ಕ ಸುಚಿತ್ರಾ ಶೆಟ್ಟಿ ಅವರು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ.

ಬಡತನೇ ಜೀವನವಾಗಿದ್ದರೂ, ಇಂದು ಸೇನೆ ಸೇವೆಗೊಂದು ಅವಕಾಶ ಕಲ್ಪಿಸಿಕೊಟ್ಟಿದೆ. ಈ ದೇಶಕ್ಕಾಗಿ ಏನಾದರು ಮಾಡಬೇಕೆಂಬ ತುಡಿತ ನನ್ನದು. ಯುವಕರು ಸೇನೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಬೇಕು.


Share News

Comments are closed.

Exit mobile version