ಗಾಝಾ: ಕಳೆದ 15 ತಿಂಗಳುಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 45,000 ಮೀರಿದೆ ಎಂದು ಫೆಲೆಸ್ತೀನ್ ನ ಆರೋಗ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ.
ಇಸ್ರೇಲ್ ದಾಳಿಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಕಳೆದ 15 ತಿಂಗಳಿನಿಂದ ಇಸ್ರೇಲ್ ನ ದಾಳಿಗೆ ಗಾಝಾದಲ್ಲಿ 17,000 ಮಕ್ಕಳು ಮೃತಪಟ್ಟಿದ್ದಾರೆ. ಈ ಅಂಕಿ-ಅಂಶಗಳಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ 11,000 ಫೆಲೆಸ್ತೀನಿಯರ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ.
ಪ್ರಸ್ತುತ ಗಾಝಾದಲ್ಲಿನ ಸ್ಥಿತಿಯು ಶೋಚನೀಯವಾಗಿದೆ. ಶಾಲೆಗಳು, ಆಶ್ರಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಎಲ್ಲವನ್ನೂ ಗುರಿಯಾಗಿಸಿ ಇಸ್ರೇಲ್ ಪಡೆಗಳು ದಾಳಿ ನಡೆಸಿದೆ ಎಂದು ಅಲ್ ಜಝೀರಾದ ದೀರ್ ಎಲ್- ಬಾಲಾಹ್ ನ ವರದಿಗಾರ ಹಿಂದ್ ಖ್ದರಿ ಹೇಳಿದ್ದಾರೆ.
ಗಾಝಾದಲ್ಲಿ ಶೆಲ್ ದಾಳಿಗಳು ಮತ್ತು ವಾಯುದಾಳಿಗಳು ನಿರಂತರವಾಗಿ ಮುಂದುವರಿದಿದೆ, ಅಮಾಯಕ ನಾಗರಿಕರನ್ನು ಹೆಲಿಕಾಪ್ಟರ್ ಗಳಲ್ಲಿ ಬೆನ್ನತ್ತಿ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಆದರೆ, ರಕ್ಷಣಾ ತಂಡಗಳು ಆ ಪ್ರದೇಶಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಸೋಮವಾರ ಕೂಡ ಇಸ್ರೇಲ್ ಗಾಝಾದ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ನರಮೇಧವನ್ನು ಮುಂದುವರಿಸಿದೆ. ಕಳೆದ 24 ಗಂಟೆಗಳಲ್ಲಿ ಗಾಝಾದಲ್ಲಿ 52 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.