Wednesday, December 18
Share News

ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜದ 2023-24ನೇ ಸಾಲಿನ ಮಹಾಸಭೆ ಹಾಗೂ ವಾರ್ಷಿಕೋತ್ಸವ ಭಾನುವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.

ವಿಶ್ವಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಕೆ. ಶ್ರೀಧರ್ ಆಚಾರ್ಯ ಮಾತನಾಡಿ, ‌‌‌‌‌‍‍‌ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಯುವ ಸಮಾಜ, ವಿಶ್ವಕರ್ಮ ಮಹಿಳಾ ಮಂಡಳಿಯಲ್ಲಿ ಇರುವ ಸದಸ್ಯರು, ಪದಾಧಿಕಾರಿಗಳು 40 ವರ್ಷ ದಾಟಿದವರೇ ಆಗಿದ್ದಾರೆ. ಸಮಾಜ ಸಂಘಟನೆ ಆಗಬೇಕಾದರೆ ಸಂಘಗಳು ಬಲಿಷ್ಠ ಆಗುವುದು ಅಗತ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆಯನ್ನು ಸಮಾಜದ ಕಾರ್ಯಕ್ರಮಗಳಿಗೆ ಕರೆತರುವ ಕೆಲಸ ಆಗಬೇಕಿದೆ. ಈ ಮೂಲಕ ಸಮಾಜದ ಸಂಘಟನೆಗೆ ಸಹಕರಿಸುತ್ತಾ, ಸಮಾಜದ ಅಭ್ಯುದಯ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಕೆ. ಪ್ರಕಾಶ್ ಆಚಾರ್ಯ ಮಾತನಾಡಿ, ಸಮಾಜದ ರಚನಾತ್ಮಕ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸುವುದು ತೀರಾ ಅಗತ್ಯ. ಮುಂದೆ ಸಾಮೂಹಿಕ ಉಪನಯನ ಸೇರಿದಂತೆ ಸಾಕಷ್ಟು ಯೋಜನೆಗಳು ಸಮಾಜದ ಮುಂದಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸಮಾಜದ ಪ್ರತಿಯೊಬ್ಬರು ಕೈಜೋಡಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕು ಎಂದರು.

ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಸಮಾಜದ ಉಪಾಧ್ಯಕ್ಷ ವಸಂತ ಆಚಾರ್ಯ ಬಿ. ನಿರ್ವಹಿಸಿದರು. ರಮೇಶ್ ಆಚಾರ್ಯ ಅಜ್ಜಿನಡ್ಕ ಅವರು ನೂತನ ಸಮಿತಿ ಸದಸ್ಯರ ವಿವರವನ್ನು ವಾಚಿಸಿದರು. ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದ್ದು, ಈ ಕಾರ್ಯಕ್ರಮವನ್ನು ಸುರೇಶ್ ಆಚಾರ್ಯ ಕಾಣಿಯೂರು ನಿರ್ವಹಿಸಿದರು.

ಆನಂದ ಆಚಾರ್ಯ ಅಜ್ಜಿನಡ್ಕ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಆಚಾರ್ಯ ಕೊಡಪಟ್ಯ ವರದಿ ವಾಚಿಸಿದರು. ಕೋಶಾಧಿಕಾರಿ ವಸಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಗಂಗಾಧರ ಆಚಾರ್ಯ ವಂದಿಸಿದರು.

ಕಿಶನ್ ಬಿ.ವಿ. ಹಾಗೂ ಪ್ರಶಾಂತ್ ಮುಕ್ವೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮನರಂಜನಾ ಕಾರ್ಯಕ್ರಮ ನಡೆಯಿತು.


Share News

Comments are closed.

Exit mobile version