ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ.
ಲೋಕಸಭೆಯಲ್ಲಿ ಮಂಡಿಸಲಾದ ಇತ್ತೀಚಿನ ದತ್ತಾಂಶಗಳ ಪ್ರಕಾರ, 2020-21 ರಿಂದ 2024-25ರ ಅವಧಿಯಲ್ಲಿ ದಕ್ಷಿಣ ಕನ್ನಡ, ಕಲಬುರಗಿ ಮತ್ತು ಹಾಸನ ಜಿಲ್ಲೆಯಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಪ್ರಕರಣಗಳ ಮೇಲೆ ನಡೆಸಲಾದ ತಪಾಸಣೆಯಲ್ಲಿ ಈ ಅಂಕಿ ಅಂಶಗಳು ಬೆಳಕಿಗೆ ಬಂದಿವೆ.
ದಕ್ಷಿಣ ಕನ್ನಡದಲ್ಲಿ ದಿಢೀರ್ ಏರಿಕೆ
ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 3,432 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಗಮನಾರ್ಹ ಸಂಗತಿಯೆಂದರೆ, ಈ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿರುವುದು 2024-25ರ ಸಾಲಿನಲ್ಲಿ. 2022-23ರಲ್ಲಿ 16 ಲಕ್ಷಕ್ಕೂ ಹೆಚ್ಚು ಜನರನ್ನು ತಪಾಸಣೆ ನಡೆಸಿದ್ದರೂ ಕೇವಲ 18 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, 2024-25ರಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ 3,328 ಪ್ರಕರಣಗಳು ದೃಢಪಟ್ಟಿವೆ.ಇನ್ನುಳಿದಂತೆ ಕಲಬುರಗಿ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಟ್ಟು 3,397 ಪ್ರಕರಣಗಳು ಮತ್ತು ಹಾಸನದಲ್ಲಿ 2,436 ಪ್ರಕರಣಗಳು ದಾಖಲಾಗಿವೆ. ಹಾಸನದಲ್ಲಿ 2023-24ರಲ್ಲಿ ಗರಿಷ್ಠ 2,224 ಪ್ರಕರಣಗಳು ಕಂಡುಬಂದಿದ್ದರೆ, ನಂತರದ ವರ್ಷದಲ್ಲಿ ಅದು 99ಕ್ಕೆ ಇಳಿದಿದೆ.
ಸರ್ಕಾರದ ಕ್ರಮ
ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ (NP-NCD) ಅಡಿಯಲ್ಲಿ ರಾಜ್ಯ ಸರ್ಕಾರವು ತಪಾಸಣೆಯನ್ನು ಚುರುಕುಗೊಳಿಸಿದೆ. ‘ಗೃಹ ಆರೋಗ್ಯ’ ಯೋಜನೆಯಡಿ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಅಪಾಯದ ಲಕ್ಷಣಗಳು ಕಂಡುಬರುವ ವ್ಯಕ್ತಿಗಳನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಮತ್ತು ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (PHC) ಹೆಚ್ಚಿನ ತಪಾಸಣೆಗೆ ಕಳುಹಿಸಲಾಗುತ್ತಿದೆ.






















