Friday, November 22
Share News

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ದೂರುದಾರೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿ ಇತ್ತೀಚೆಗೆ ದೂರು ನೀಡಿದ್ದರು. ಅದರಂತೆ, ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ದೂರುದಾರೆಯು ಕಳೆದ ಕೆಲವು ವರ್ಷಗಳಿಂದ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರು. ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಚುನಾವಣೆ ಹೊಸ್ತಿಲಲ್ಲೇ ಬಂದಿತ್ತು ಆರೋಪ
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ, ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದು ಕೆಲವು ದಿನಗಳ ಮಟ್ಟಿಗೆ ರಾಜಕೀಯವಾಗಿಯೂ ಸದ್ದು ಮಾಡಿತ್ತು.

ಯಡಿಯೂರಪ್ಪ ವಿರುದ್ಧ ಮಾಡಿದ್ದ ಆರೋಪವೇನು?
ಫೆಬ್ರವರಿ 2 ರಂದು ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಸದಾಶಿವನಗರ ಠಾಣೆಗೆ ದೂರು ನೀಡಲಾಗಿತ್ತು.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ನ್ಯಾಯ ಕೊಡಿಸಿ ಎಂದು ತಾಯಿ-ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು. ಅನ್ಯಾಯ ಆಗಿದೆ ಎಂದು ನನ್ನ ಬಳಿ ಬಂದಿದ್ದರು. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ನನ್ನ ವಿರುದ್ಧ ಏನೇನೋ ಆರೋಪ ಮಾಡಿದರು. ಬಳಿಕ ಅವರನ್ನು ಪೊಲೀಸ್ ಕಮಿಷನರ್ ಬಳಿ ಕಳಿಸಿಕೊಟ್ಟಿದ್ದೆ ಎಂದು ಹೇಳಿದ್ದರು. ನಂತರ ಪ್ರಕರಣದ ಕಾವು ತುಸು ತಣ್ಣಗಾಗಿತ್ತು.


Share News

Comments are closed.

Exit mobile version