ಪುತ್ತೂರು: ಪ್ರಪಂಚದ ನೂರ ತೊಂಬತ್ತಮೂರಕ್ಕೂ ಹೆಚ್ಚಿನ ರಾಷ್ಟ್ರಗಳ ಮಧ್ಯೆ ಭಾರತ ನಿರ್ಲಕ್ಷಿಸಲಾಗದ ದೇಶವಾಗಿ ಬೆಳೆದುನಿಂತಿದೆ. ತಮ್ಮ ಉದ್ಯೋಗಕ್ಕೆ ಬುದ್ಧಿವಂತ ಭಾರತೀಯರಿಂದ ಸಂಚಕಾರ ಬರಬಹುದೆಂಬ ಆತಂಕದಲ್ಲಿ ಪಾಶ್ಚಿಮಾತ್ಯರಿದ್ದಾರೆ. ಇಂದು ಇಡಿಯ ಜಗತ್ತು ಪ್ರತಿಭಾನ್ವಿತರಿಗಾಗಿ ಭಾರತದೆಡೆಗೆ ದೃಷ್ಟಿ ಹಾಯಿಸುತ್ತಿದೆ. ಆದ್ದರಿಂದ ವಿಶ್ವಕ್ಕೆ ಅತಿದೊಡ್ಡ ಪ್ರತಿಭಾ ಪೂರೈಕೆದಾರ ರಾಷ್ಟ್ರವಾಗಿ ಭಾರತ ಕಂಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಉಲ್ಲಾಸಭರಿತ ಮನಸ್ಸನ್ನು ಹೊಂದಿ, ನಾನೊಬ್ಬ ಉತ್ಕೃಷ್ಟ ಮನುಷ್ಯನಾಗುತ್ತೇನೆ ಎಂದು ನಂಬಿ ಮುಂದುವರೆಯಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ ಮಾನಸೋಲ್ಲಾಸ 2025-26 ಅನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ನಮ್ಮ ಸುತ್ತ ನಾನಾ ಬಗೆಯ ಜನರಿರುತ್ತಾರೆ. ಕೆಲವರು ಸಾಧ್ಯತೆಯ ಅನಾವರಣಕ್ಕೆ ಕಾರಣರೆನಿಸುತ್ತಾರೆ. ಮತ್ತೆ ಕೆಲವರು ಸಾಧ್ಯವಾಗುತ್ತಿರುವ ವಿಚಾರಗಳನ್ನು ಗಮನಿಸುತ್ತಿರುತ್ತಾರೆ. ಇನ್ನು ಕೆಲವರು ಸಾಧ್ಯವಾದದ್ದರೆಡೆಗೆ ಬೆರಗಿನಿಂದ ನೋಡುತ್ತಿರುತ್ತಾರೆ. ಆದರೆ ನಾವು ನೋಡುಗರಾಗದೆ ಮಾಡುಗರಾಗಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಬೇಕು. ನಮ್ಮೊಳಗಿನ ಸಾಮರ್ಥ್ಯವನ್ನು ಸಮಗ್ರವಾಗಿ ಬಳಸಿಕೊಳ್ಳಬೇಕು. ನಾವು ಅಂದುಕೊಂಡದ್ದನ್ನು ಸಾಧಿಸುತ್ತೇವೆ ಎಂದು ನಂಬುವುದು ಎಲ್ಲದಕ್ಕಿಂತ ಮುಖ್ಯವಾದ ವಿಚಾರ. ಯಶಸ್ಸು ಅನ್ನುವುದು ನಮ್ಮ ಆಯ್ಕೆಯಾಗಬೇಕೇ ವಿನಃ ದೊರೆತ ಅವಕಾಶವಾಗಬಾರದು ಎಂದು ಹೇಳಿದರು.
ನಮ್ಮ ನಡುವೆ ನಕಾರಾತ್ಮಕ ಚಿಂತನೆಗಳುಳ್ಳ ಜನರಿರುತ್ತಾರೆ. ಯಾರು ಯಾವುದನ್ನು ಮಾಡಹೊರಟರೂ ಅವರ ಉತ್ಸಾಹಕ್ಕೆ ತಣ್ಣೀರೆರಚುತ್ತಾರೆ. ಅಂತಹವರ ಮಾತುಗಳಿಗೆ ಕಿವಿಯಾಗುವುದನ್ನು ಬಿಟ್ಟು ನಮ್ಮ ಹಾದಿಯಲ್ಲಿ ಮುನ್ನಡೆಯಬೇಕು. ಹಾಗೆಯೇ ಕೃತಜ್ಞತೆಯೆಂಬ ಭಾವ ನಮ್ಮೊಳಗೆ ಸದಾ ಜಾಗೃತವಾಗಿರಬೇಕು. ನಮ್ಮ ಹೆತ್ತವರು, ನಮ್ಮ ಬೋಧಕರು, ನಮ್ಮನ್ನು ರೂಪಿಸಿದ ಶಿಕ್ಷಣ ಸಂಸ್ಥೆ, ನಮ್ಮ ಸಮಾಜ ಹಾಗೂ ಅಂತಿಮವಾಗಿ ನಮ್ಮ ದೇಶದೆಡೆಗೆ ಸದಾ ಕೃತಜ್ಞರಾಗಿರಬೇಕು. ಅದು ನಮ್ಮ ಭಾರತೀಯ ಮೂಲ ಸಂಸ್ಕೃತಿಯೂ ಹೌದು ಎಂದು ನುಡಿದರು.
ನಮ್ಮಲ್ಲಿ ನಾನಾ ಬಗೆಯ ಪ್ರತಿಭೆಗಳಿರಬಹುದು. ನಟನೆ, ನೃತ್ಯ, ಕಲೆ ಹೀಗೆ ನಾನಾ ಬಗೆಯ ಸಾಮರ್ಥ್ಯ ಇರಬಹುದು. ಇಂಜಿನಿಯರ್, ಡಾಕ್ಟರ್ ಆಗಿರಬಹುದು. ಆದರೆ ಅಂತಿಮವಾಗಿ ನಾವು ಹೇಗೆ ನಮ್ಮ ಹೆಗ್ಗುರುತನ್ನು ದಾಖಲಿಸಬೇಕೆಂಬುದರ ಬಗೆಗೆ ನಮ್ಮಲ್ಲಿ ಸ್ಪಷ್ಟತೆ ಇರಬೇಕು. ಆಧುನಿಕ ಭಾರತ ನಮ್ಮ ಪರಿಣತಿಗೆ ಅತ್ಯುತ್ಕೃಷ್ಟ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಜಗತ್ತು ನಮ್ಮನ್ನು ಗುರುತಿಸಲಾರಂಭಿಸುತ್ತದೆ. ಆದ್ದರಿಂದ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಅತ್ಯುತ್ಕೃಷ್ಟವೆನಿಸುವೆಡೆಗೆ ದೃಷ್ಟಿ ಇರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವಂತಹವರ ಅವಶ್ಯಕತೆ ಇದೆ. ಅದಕ್ಕಾಗಿ ಮಾದರಿ ವ್ಯಕ್ತಿಗಳನ್ನು ನಾವು ತೋರಿಸಿಕೊಡಬೇಕಾಗಿದೆ. ಸಮಾಜದಲ್ಲಿ ಎತ್ತರಕ್ಕೇರಿದ ಎಲ್ಲರೂ ಆದರ್ಶರಾಗಿರುವುದಿಲ್ಲ, ಸ್ವಾರ್ಥಿಗಳಾಗಿರುತ್ತಾರೆ. ಸಮಾಜದಿಂದ ಎಷ್ಟು ಹೀರಬಹುದು ಎಂಬುದನ್ನೇ ಯೋಚಿಸುತ್ತಿರುತ್ತಾರೆ. ಅಂತಹವರ ಮಧ್ಯೆ ಕೆಲವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಅಂತಹವರ ಸಾಲಿಗೆ ಯುವಸಮುದಾಯ ಏರಬೇಕು ಎಂದರು.
ಅಂಬಿಕಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ, ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಚರ್ಮರೋಗ ತಜ್ಞೆ ಡಾ.ಭವಿಷ್ಯಾ ಶೆಟ್ಟಿ ಅನಿಸಿಕೆ ಹಂಚಿಕೊಂಡರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಎರಡೂ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಲಕ್ಷ್ಮೀಕಾಂತ ಜಿ. ಆಚಾರ್ಯ ಹಾಗೂ ಹರ್ಷಕುಮಾರ್ ಎಂ.ಎಸ್., ವಿದ್ಯಾರ್ಥಿ ನಾಯಕರಾದ ಜಶ್ಮಿ ಡಿ.ಎಸ್, ಶ್ರೀಲಕ್ಷ್ಮೀ ಸುರೇಶ್, ಸನ್ನಿಧಿ ಎನ್., ಕೆ.ಎಲ್. ಶಶಾಂಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶ್ರೀಹರಿ ಶಂಖನಾದಗೈದರು. ವಿದ್ಯಾರ್ಥಿನಿಯರಾದ ಅನನ್ಯಾ, ಶ್ರೀದೇವಿ, ಸಮನ್ವಿಕಾ, ಸೃಷ್ಟಿ ಹಾಗೂ ನಿರೀಕ್ಷಾ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಉಪಪ್ರಾಂಶುಪಾಲೆ ಶೈನಿ ಕೆ.ಜೆ. ಹಾಗೂ ಉಪನ್ಯಾಸಕಿ ಅಪರ್ಣಾ ಉಪಾಧ್ಯಾಯ ದತ್ತಿನಿಧಿ ಬಹುಮಾನ ಹಾಗೂ ವಿವಿಧ ಬಹುಮಾನಗಳ ಪಟ್ಟಿ ವಾಚಿಸಿದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ ಪ್ರಸಾದ್ ಡಿ.ಎಸ್. ವಂದಿಸಿದರು. ವಿದ್ಯಾರ್ಥಿನಿಯರಾದ ಮಾನ್ಯ, ಸಸ್ತಿ ರೈ, ತನ್ವಿ ಹಾಗೂ ಘನಶ್ರೀ ಕಾರ್ಯಕ್ರಮ ನಿರ್ವಹಿಸಿದರು.
























