ಪುತ್ತೂರು: ಪರ್ಲಡ್ಕ ಹಿ.ಪ್ರಾ. ಶಾಲೆಗೆ ಮಂಗಳವಾರ ಮಧ್ಯಾಹ್ನ ದಿಢೀರನೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ವಿದ್ಯಾರ್ಥಿಗಳೊಂದಿಗೆ ಸರತಿಯಲ್ಲಿ ಕುಳಿತು ಬಿಸಿಯೂಟ ಸವಿದರು.
ಬಿಸಿಯೂಟ ಪರಿಶೀಲನೆ ನಡೆಸಿದ ಅವರು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ದಿನಾಲೂ ಊಟ ಚೆನ್ನಾಗಿರುತ್ತದಾ? ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರ? ಮೊಟ್ಟೆ ಕೊಡ್ತಾರ? ಎಂದು ಮಕ್ಕಳಲ್ಲಿ ಪ್ರಶ್ನಿಸಿ, ಮಕ್ಕಳಿಂದ ಉತ್ತರ ಪಡೆದುಕೊಂಡರು.
ಬಳಿಕ ಮಾತನಾಡಿದ ಶಾಸಕರು, ಸರಕಾರ ಪ್ರತೀ ಶಾಲೆಯಲ್ಲೂ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದೆ. ಮಕ್ಕಳಿಗೆ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ಕೊಡಬೇಕು ಎಂಬ ಉದ್ದೇಶದಿಂದ ಸರಕಾರ ಮಕ್ಕಳ ಊಟದ ಜೊತೆ ಮೊಟ್ಟೆಯನ್ನು ನೀಡುತ್ತಿದೆ. ಸರಕಾರದಿಂದ ಸಿಗುವ ಈ ಸವಲತ್ತು ಪ್ರತೀ ಶಾಲೆಗೂ ತಲುಪುತ್ತಿದೆ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬಿಸಿಯೂಟ ದೊರೆಯುತ್ತದಾ ಎಂಬುದನ್ನು ಪರಿಶೀಲನೆ ಮಾಡುವುದು ಓರ್ವ ಶಾಸಕನಾದ ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ಇಂದು ನಗರದ ಪರ್ಲಡ್ಕ ಸರಕಾರಿ ಶಾಲೆಗೆ ಬಂದು ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಊಟವನ್ನು ಮಾಡಿದ್ದೇನೆ ಚೆನ್ನಾಗಿದೆ ಎಂದು ಹೇಳಿದರು.
ಮೆಣಸು ಅರೆದು ಹಾಕಿ:
ರೆಡಿಮೇಡ್ ಮೆಣಸಿನ ಹುಡಿ, ಸಾಂಬಾರ್ ಹುಡಿಯನ್ನು ಸಾಂಬಾರಿಗೆ ಬಳಸುವುದು ಬೇಡ. ಅರೆದು ಅಥವಾ ಕಡೆದು ಹಾಕುವಂತೆ ಶಾಲೆಗಳಿಗೆ ತಿಳಿಸಿದ್ದೇನೆ. ಪರ್ಲಡ್ಕ ಶಾಲೆಯಲ್ಲಿ ಮೆಣಸನ್ನು ಅರೆದು ಹಾಕಿದ್ದಾರೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ಊಟ ಹಾಕುವಂತೆಯೂ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಶಾಲೆಗಳಿಗೆ, ಅಂಗನವಾಡಿಗಳಿಗೆ, ಹಾಸ್ಟೆಲ್‌ಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ ಕೊಡುತ್ತಿರುವ ಆಹಾರವನ್ನು ಪರಿಶೀಲನೆ ಮಾಡಲಿದ್ದೇನೆ ಎಂದು ಶಾಸಕರು ತಿಳಿಸಿದರು.