ಪುತ್ತೂರು: ಪಠ್ಯ ಪುಸ್ತಕದಲ್ಲಿ ಉತ್ತಮ ವಿಚಾರಗಳು ಮಾತ್ರ ಇರುತ್ತವೆ. ಆದರೆ ಸಮಾಜದಲ್ಲಿ ಋಣಾತ್ಮಕ ಸಂಗತಿಗಳು ಬೇಗ ಪ್ರಚಾರ ಪಡೆಯುತ್ತವೆ. ನಾವು ಯಾವಾಗಲೂ ಒಳ್ಳೆ ವಿಚಾರಗಳನ್ನು ಚಿಂತನೆ ಮಾಡುತ್ತಿರಬೇಕು. ನಮ್ಮ ಜೀವನದ ಕಾನೂನು ಗಟ್ಟಿಯಾಗಿದ್ದರೆ ಹೊರಗಿನ ಕಾನೂನಿನ ಅವಶ್ಯಕತೆ ಇಲ್ಲ ಎಂದು ಪುತ್ತೂರು ನಗರ ಠಾಣೆಯ ಪೊಲೀಸ್ ಸಬ್’ಇನ್ಸ್’ಪೆಕ್ಟರ್ ಆಂಜನೇಯ ರೆಡ್ಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಕಾನೂನು ಮತ್ತು ಪೋಸ್ಕೋದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಒಬ್ಬ ವಿದ್ಯಾರ್ಥಿಯಾದವನು ಶಿಕ್ಷಕರಿಗೆ ಗೌರವವನ್ನು ಕೊಡಬೇಕು. ಜ್ಞಾನ ಮತ್ತು ಶಿಕ್ಷಣ ಎರಡೂ ಬೇರೆ ಬೇರೆ. ಒಳ್ಳೆಯ ನಡವಳಿಕೆ ಇಲ್ಲದಿದ್ದರೆ ಶಿಕ್ಷಣ ಕಲಿತರೂ ವ್ಯರ್ಥ. ಭಗವದ್ಗೀತೆಯು ನಮ್ಮ ಜೀವನದ ಗುರು ಇದ್ದ ಹಾಗೆ. ಅದು ನಮ್ಮ ಆತ್ಮ ರಕ್ಷಣೆಯಾಗಿ ಕಾಯುವ ಗ್ರಂಥವೂ ಕೂಡ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳಾದವರು ಭಗವದ್ಗೀತೆಯನ್ನು ಪ್ರತಿನಿತ್ಯ ಓದಬೇಕು. ಆಗ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಶಾಲಾ ಪ್ರಾಂಶುಪಾಲರಾದ ಮಾಲತಿ ಡಿ. ಮಾತನಾಡಿ, ನಾವು ಹೊರಗಿನಿಂದ ಎಷ್ಟೋ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆದರೆ ನಮ್ಮೊಳಗೆ ನಡೆಯುವ ಪರಿವರ್ತನೆ, ನಮ್ಮಿಂದಲೇ ಸಾಧಿತವಾಗಬೇಕು. ಜೀವನ ಎಂದರೆ ಶಕ್ತಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಪುತ್ತೂರಿನ ಪೋಲೀಸ್ ಕಾನ್‌ಸ್ಟೇಬಲ್ ನವೀನ್, ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.
ನ್ಯಾಯ ಮತ್ತು ಕಾನೂನಿನ ಬಗ್ಗೆ ವಿದ್ಯಾರ್ಥಿ ಪ್ರಿಯಾಂಶು ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ತನ್ವಿ ಎ. ರೈ ಸ್ವಾಗತಿಸಿ, ಮಂದಿರಾ ಕಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.