ಪುತ್ತೂರು: ಕಾಶ್ಮೀರದಲ್ಲಿ ನಡೆದಿರುವ ಉಗ್ರ ದಾಳಿಯ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡುವ ಮಹತ್ವದ ಘೋಷಣೆಯನ್ನು ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ ಮಾಡಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾಶ್ಮೀರದ ಫಹಲ್ಗಾಮ್’ನಲ್ಲಿ ನಡೆದಿರುವ ಉಗ್ರರ ಪೈಶಾಚಿಕ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸುತ್ತೇವೆ. ಧರ್ಮದ್ವೇಷದ ಜ್ವಾಲೆಗೆ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ದುರುಳ ಭಯೋತ್ಪಾದಕರ ವಿಧ್ವಂಸಕಾರಿ ದುರಾಚಾರಕ್ಕೆ ಇಡೀಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರ ಇನ್ನೊಂದು ಭಾಗವಾಗಿ ಘಟನೆಯಲ್ಲಿ ಸಂತ್ರಸ್ತರಾದವರ ಮಕ್ಕಳಿಗೆ ನೆರವಿನ ಹಸ್ತಾ ಚಾಚುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್.ಕೆ.ಜಿ.ಯಿಂದ ತೊಡಗಿ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಕಾಶ್ಮೀರದ ಭಯೋತ್ಪಾದಕ ದಾಳಿ ಸಂತ್ರಸ್ತರ ಮಕ್ಕಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯ ನೀಡಲಾಗುವುದು. ಜತೆಗೆ, ಊಟೋಪಚಾರ ಹಾಗೂ ವಸತಿಗಳೂ ಶುಲ್ಕರಹಿತವಾಗಿ ಲಭ್ಯವಾಗಲಿದೆ ಎಂದರು.
ದೇಶದ ಬಗ್ಗೆ, ನೊಂದವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಈ ಹಿಂದೆ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಘೋರತೆಯನ್ನು ಮನಗಂಡು ಕಾಶ್ಮೀರಿ ಸಂತ್ರಸ್ತ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು. ಅದರನ್ವಯ ಇಬ್ಬರು ವಿದ್ಯಾರ್ಥಿಗಳು ಕಾಶ್ಮೀರದಿಂದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಆಗಮಿಸಿ ಪಿಯು ಶಿಕ್ಷಣಕ್ಕಾಗಿ ದಾಖಲಾತಿ ಹೊಂದಿದ್ದಾರೆ ಎಂದು ಸ್ಮರಿಸಿಕೊಂಡರು.
ಈಗಾಗಲೇ ಅಂಬಿಕಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳ ವತಿಯಿಂದ ಕಾಶ್ಮೀರದಲ್ಲಿನ ಭಯೋತ್ಫಾದಕ ದಾಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆದು, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವಂತೆ ದೇಶದ ಗೃಹ ಸಚಿವರಿಗೆ ಆಗ್ರಹಪೂರ್ವಕ ಪತ್ರವನ್ನು ಪುತ್ತೂರಿನ ಸಹಾಯಕ ಆಯುಕ್ತರ ಮೂಲಕ ಕಳುಹಿಸಿಕೊಡಲಾಗಿದೆ ಎಂದರು.
ಆಡಳಿತ ಮಂಡಳಿ ಸದಸ್ಯ ಡಾ. ಎಚ್. ಮಾಧವ ಭಟ್ ಮಾತನಾಡಿ, ಧರ್ಮವನ್ನು ನೆಪವಾಗಿಟ್ಟುಕೊಂಡಲ್ಲ, ಕಾರಣವಾಗಿಟ್ಟುಕೊಂಡೇ ನಾಗರಿಕರ ಹತ್ಯೆ ಮಾಡಿರುವ ಉಗ್ರರ ಕೃತ್ಯ ಖಂಡನೀಯ. ಈ ಕೃತ್ಯದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆಯಿಂದ ಅವರಿಗೆ ನೆರವನ್ನು ನೀಡುವ ಅಗತ್ಯವೂ ಇದೆ. ಈ ಹಿನ್ನೆಲೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಮಹತ್ವದ ಹೆಜ್ಜೆ ಇಟ್ಟಿದೆ. ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಘೋಷಣೆ ಮಾಡಿದ್ದೇವೆ. ಇಂತಹ ಇನ್ನು ಹಲವು ರೀತಿಯ ನೆರವು ದೇಶಾದ್ಯಂತ ದೊರಕುವಂತಾಗಲಿ ಎಂದು ಆಶಿಸಿದರು.
ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಮಾತನಾಡಿ, ರಾಜಾಶ್ರಯದಲ್ಲಿ ಎಲ್ಲಾ ರೀತಿಯ ನೆರವು ನೀಡುತ್ತಿದ್ದ ದಿನಗಳಿದ್ದವು. ಇಂದು ಎಲ್ಲವೂ ವಾಣಿಜ್ಯೀಕರಣವಾಗಿದೆ. ಇದರ ನಡುವೆ ಭವ್ಯ ಭಾರತದ ಇತಿಹಾಸವನ್ನು ಮರುಕಳಿಸುವಂತೆ ಮಾಡುವ ಪ್ರಯತ್ನಕ್ಕೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಈ ಸಂದೇಶ ದೇಶಾದ್ಯಂತ ತಲುಪಬೇಕು. ಸಂತ್ರಸ್ತರ ಬೆಂಬಲಕ್ಕೆ ಇನ್ನಷ್ಟು ನೆರವು ಹರಿದು ಬರಬೇಕು ಎಂದರು.
ಆಡಳಿತ ಮಂಡಳಿ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.