Friday, November 22
Share News

ಬೆಂಗಳೂರು: ಲೋಕಸಭಾ ಚುನಾವಣೆಯ ಸ್ಪರ್ಧೆಗೆ ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿರುವ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತೆಗೆದುಕೊಳ್ಳುವ ಯಾವುದೇ ರಾಜಕೀಯ ನಿರ್ಣಯಕ್ಕೆ ತಮ್ಮ ಬೆಂಬಲವಿದೆ ಎಂದು ಒಕ್ಕಲಿಗರ ಸಂಘ ಪ್ರಕಟಿಸಿದೆ.

ಈ ನಡುವೆ, ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯೂ ಸೇರಿದಂತೆ ಪ್ರಮುಖ ರಾಜಕೀಯ ತೀರ್ಮಾನವನ್ನು ಬುಧವಾರ ಬೆಳಗ್ಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಸೋಮವಾರವಷ್ಟೇ 71ನೇ ಜನ್ಮ ದಿನ ಆಚರಿಸಿಕೊಂಡ ದೇವರಗುಂಡ ವೆಂಕಪ್ಪ ಸದಾನಂದ ಗೌಡ ಅವರು ಸಂಜೆ ತಮ್ಮ ಆತ್ಮೀಯರ ಜತೆ ಮುಂದಿನ ರಾಜಕೀಯ ತೀರ್ಮಾನದ ಬಗ್ಗೆ ಚರ್ಚೆ ನಡೆಸಿದ್ದರು. ಅವರು ಮಂಗಳವಾರ ಬೆಳಗ್ಗೆ 10.30ಕ್ಕೆ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಘೋಷಿಸಿ ಪತ್ರಿಕಾಗೋಷ್ಠಿಗೂ ಆಹ್ವಾನ ನೀಡಿದ್ದರು. ಆದರೆ, ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಮುಂದೂಡಿದ್ದರು.

ಒಕ್ಕಲಿಗರ ಸಂಘದ ಜತೆ ಮಾತುಕತೆ ನಡೆಸಬೇಕಾಗಿರುವುದರಿಂದ ಪತ್ರಿಕಾಗೋಷ್ಠಿಯನ್ನು ಬುಧವಾರಕ್ಕೆ ಮುಂದೂಡಿರುವುದಾಗಿ ಪ್ರಕಟಿಸಿದ ಡಿ.ವಿ. ಸದಾನಂದ ಗೌಡರು ಒಕ್ಕಲಿಗರ ಸಂಘದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆಗಿನ ಸಭೆಯ ಬಳಿಕ ಮಾತನಾಡಿದ ಡಿ.ವಿ. ಸದಾನಂದ ಗೌಡರು, ಒಕ್ಕಲಿಗರ ಸಂಘದ ಅಧ್ಯಕ್ಷರು, ನಿರ್ದೇಶಕರ ಜತೆ ಸಭೆ ನಡೆಸಿದ್ದೇನೆ ಒಂದಷ್ಟು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಕಾಂಗ್ರೆಸ್ ನಿಂದ ಅಫರ್ ಇದೆ. ಈಗ ಯಾವುದನ್ನೂ ನಾನು ಹೇಳಲ್ಲ, ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ ಎಂದು ಹೇಳಿದರು.

ಡಿವಿಎಸ್‌ಗೆ ಪೂರ್ಣ ಬೆಂಬಲ:
ಈ ನಡುವೆ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಹೇಳಿಕೆ ನೀಡಿ, ನಮ್ಮ ಒಕ್ಕಲಿಗ ಸಮುದಾಯಕ್ಕೆ ಮೂರೂ ಪಕ್ಷಗಳಲ್ಲಿ ಟಿಕೆಟ್ ಕೊಡುವಲ್ಲಿ ಅನ್ಯಾಯ ಆಗಿದೆ. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಎಂಟು ಟಿಕೆಟ್ ಕೊಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಎರಡೇ ಟಿಕೆಟ್ ಕೊಡಲಾಗಿದೆ. ಒಕ್ಕಲಿಗ ಸಮುದಾಯಕ್ಕೂ ಎಂಟು ಕಡೆ ಟಿಕೆಟ್ ಕೊಡಬೇಕು ಎಂದು ಬೇಡಿಕೆ ಇಟ್ಟರು.

ಬಿಜೆಪಿಯಲ್ಲಿ ಸಿಟಿ ರವಿ, ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ ಅವರು, ಸದಾನಂದ ಗೌಡರು ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಇರುತ್ತದೆ. ಈ ಎಲ್ಲ ವಿಚಾರಗಳನ್ನು ಡಿ.ವಿ. ಸದಾನಂದ ಗೌಡರೇ ಸುದ್ದಿಗೋಷ್ಠಿ ಮಾತಿ ಹೇಳುತ್ತಾರೆ ಎಂದರು. ನಮ್ಮ ಸಮುದಾಯಕ್ಕೆ ಅನ್ಯಾಯ ಆದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹನುಮಂತಯ್ಯ ಹೇಳಿದರು.


Share News

Comments are closed.

Exit mobile version