Friday, November 22
Share News

ಬೆಂಗಳೂರು: ಛತ್ರಿ ಹಿಡಿದು NWKRTC ಬಸ್ ಚಲಾಯಿಸಿದ್ದ ಚಾಲಕನ ವಿಡಿಯೋ ವೈರಲ್ ಆಗಿದ್ದು, ಇದೀಗ ಈ ವಿಡಿಯೋನ ಅಸಲಿಯತ್ತು ಬಯಲಾಗಿದೆ. ಮನೋರಂಜನೆಗಾಗಿ ಛತ್ರಿ ಹಿಡಿದು ಬಸ್ ಚಲಾಯಿಸಿದ್ದ ಡ್ರೈವರ್ ಹನುಮಂತಪ್ಪ ಕಿಲ್ಲೇದಾರ ಅಮಾನತುಗೊಂಡಿದ್ದಾರೆ.

ಬಸ್ ಸೋರುತ್ತಿದೆ ಎನ್ನುವಂತೆ ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದಂತೆಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತನಿಖೆ ನಡೆಸಿದ್ದು, ಮನರಂಜನೆಗಾಗಿ ಚಾಲಕ ಕೊಡೆ ಹಿಡಿದು ಬಸ್‌ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಹನುಮಂತಪ್ಪ ಕಿಲ್ಲೇದಾರ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಬಸ್ನಲ್ಲಿ ಮಳೆ ನೀರು ಸೋರುತ್ತಿರಲಿಲ್ಲ. ಬಸ್ ನಲ್ಲಿ ಪ್ರಯಾಣಿಕರು ಯಾರು ಇಲ್ಲದ ವೇಳೆಯಲ್ಲಿ ಕಂಡಕ್ಟರ್ ಅನಿತಾ ಹೆಚ್ ಬಳಿಯಿದ್ದ ಛತ್ರಿ ತೆಗೆದುಕೊಂಡು ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ಮಳೆ ನೀರು ಸೋರಿಕೆ ಬಗ್ಗೆ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲ ಎಂದು NWKRTC ಅಧಿಕಾರಿಗಳು ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದಾರೆ.

ವಾಯವ್ಯ ಕರ್ನಾಟಕ ಸಾರಿಗೆ (NWKRTC Bus) ಬಸ್ಸೊಂದರಲ್ಲಿ ಸೋರುತ್ತಿರುವ ಮಳೆನೀರಿನಿಂದ ರಕ್ಷಣೆ ಪಡೆಯುವ ರೀತಿ ಹನುಮಂತಪ್ಪ ಕಿಲ್ಲೇದಾರ ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಮತ್ತೊಂದು ಕೈಯಿಂದ ಬಸ್ ಚಲಾಯಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.

ಸ್ಪಷ್ಟನೆಯಲ್ಲಿ ಏನಿದೆ?
ಧಾರವಾಡ ಘಟಕದ ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕರಾಗಿ ಅನಿತಾ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದಾಗ ಸಂಜೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದಾಗ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು ಹಿಡಿದುಕೊಂಡು ಬಸ್‌ ಚಾಲನೆ ಮಾಡಿದ್ದಾರೆ. ಚಾಲನೆ ಮಾಡುತ್ತಿರುವ ದೃಶ್ಯವನ್ನು ನಿರ್ವಾಹಕಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ಮಳೆ ಬರುತ್ತಿದ್ದಾಗ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಿಂದ ಸೋರುತ್ತಿರಲಿಲ್ಲ.ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲಾಗಿಲ್ಲ. ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿದ್ದು ಮೇಲ್ಚಾವಣಿ ಸೋರುತ್ತಿಲ್ಲ ಎನ್ನುವುದನ್ನು ಖಚಿತಪಡಿಸಲಾಗಿದೆ. ಈ ವಿಡಿಯೋದ ಬಗ್ಗೆ ಸಿಬ್ಬಂದಿಯಿಂದ ಸ್ಪಷ್ಟೀಕರಣ ಪಡೆಯಲಾಗಿದ್ದು ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.


Share News

Comments are closed.

Exit mobile version