ಮಂಗಳೂರು: 2021ರಲ್ಲಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ 3 ಮಂದಿ ಆರೋಪಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಆರೋಪಿಗಳನ್ನು ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿ ಎಂದು ಗುರುತಿಸಲಾಗಿದೆ.
ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದಾರೆ. ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಹಾಗೂ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಧೀಶ ಮಾನು ಅವರು ಆದೇಶಿಸಿದ್ದಾರೆ.
2021 ನ.21ರಂದು ನಡೆದ ಪ್ರಕರಣ:
2021 ನ.21ರಂದು ಮಧ್ಯಾಹ್ನ ಊಟ ಮುಗಿಸಿ ಆಟವಾಡಲು ಒಡಹುಟ್ಟಿದವರ ಜತೆ ಹೊರಗೆ ಹೋಗಿದ್ದಳು ಬಾಲಕಿ. ಉಳಿದ ಮೂವರು ವಾಪಸ್ ಬಂದರೂ ಬಾಲಕಿ ವಾಪಸ್ ಬಂದಿರಲಿಲ್ಲ. ಪೋಷಕರು ಹುಡುಕಾಡಿದಾಗ ಬಾಲಕಿ ಶವ ಸಂಜೆ 6 ಗಂಟೆ ಸುಮಾರಿಗೆ ಕಾರ್ಖಾನೆಯೊಳಗಿನ ಚರಂಡಿಯಲ್ಲಿ ಕಂಡು ಬಂದಿತ್ತು.
ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಪರಾಧದ ಗಂಭೀರತೆಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ತಂಡಗಳು ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷ್ಯಗಳು, ಪ್ರತ್ಯಕ್ಷದರ್ಶಿಗಳು, ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ 21 ವರ್ಷದ ಯುವಕ, ಅದೇ ಸ್ಥಳದ 20 ವರ್ಷದ ಮತ್ತೊಬ್ಬ ಯುವಕ, ಜಾರ್ಖಂಡ್‌ನ ರಾಂಚಿ ಜಿಲ್ಲೆಯ 33 ವರ್ಷದ ವ್ಯಕ್ತಿ ಮತ್ತು ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ನಿವಾಸಿ 20 ವರ್ಷದ ಯುವಕ. ಇವರಲ್ಲಿ ಮೂವರು ಕಾರ್ಖಾನೆಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದು, ಮೇಲಿನ ನಾಲ್ವರಲ್ಲಿ ಒಬ್ಬರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದರು.
ಇಬ್ಬರು ಆರೋಪಿಗಳು ಹಲವು ಬಾರಿ ಬಾಲಕಿಯನ್ನು ತಮ್ಮ ಕೋಣೆಗೆ ಕರೆಸಿಕೊಂಡು ಆಕೆಗೆ ಚಾಕೊಲೇಟ್ ಇತ್ಯಾದಿಗಳನ್ನು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು. 2021 ನವೆಂಬರ್ 21 ರಂದು ಮಧ್ಯಾಹ್ನ ಬಾಲಕಿ ಆಟವಾಡಲು ಹೋದಾಗ, ಆರೋಪಿಗಳು ಬಾಲಕಿಯ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡು ಬಲವಂತವಾಗಿ ಕೋಣೆಗೆ ಕರೆದೊಯ್ದ ನಂತರ ಸರದಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ರಕ್ತಸ್ರಾವ ಮತ್ತು ನೋವಿನಿಂದ ಬಾಲಕಿ ಜೋರಾಗಿ ಅಳುತ್ತಿದ್ದಾಗ, ಒಬ್ಬ ವ್ಯಕ್ತಿ ಅವಳನ್ನು ಕೊಚ್ಚಿ ಸಾಯಿಸಿಬಿಟ್ಟಿದ್ದನು. ನಂತರ ದೇಹವನ್ನು ಚರಂಡಿಗೆ ಎಸೆದು ದುಷ್ಕೃತ್ಯ ಎಸಗಿದ್ದರು.