ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆ ಈಶ್ವರಮಂಗಲದಲ್ಲಿ ಜ. 10ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಈಶ್ವರಮಂಗಲ ಮುಖ್ಯರಸ್ತೆಯ ಶ್ರೀ ಗಣೇಶ್ ಕಾಂಪ್ಲೆಕ್ಸ್’ನ ಪ್ರಥಮ ಮಹಡಿಯಲ್ಲಿ ಶಾಖೆ ಕಾರ್ಯಾರಂಭ ಮಾಡಲಿದೆ ಎಂದು ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಪೌಝಿಯ ಇಬ್ರಾಹಿಂ ಕೆ., ಶ್ರೀ ಗಣೇಶ್ ಕಾಂಪ್ಲೆಕ್ಸ್ ಕಟ್ಟಡ ಮಾಲಕ ಗಣೇಶ್ ರೈ ಎಂ. ಮುಳಿಪಡ್ಪು ಮುಖ್ಯ ಅತಿಥಿಗಳಾಗಿರುವರು ಎಂದರು.
2002ರಲ್ಲಿ ಆರಂಭಗೊಂಡ ಆದರ್ಶ ವಿವಿದೋದ್ಧೇಶ ಸಹಕಾರ ಸಂಘವು ಜಿಲ್ಲೆಯ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ. ರೋಡ್, ಕಲ್ಲಡ್ಕ, ಪಾಂಡೇಶ್ವರ ಮೊದಲಾದ ಕಡೆಗಳಲ್ಲಿ ಒಟ್ಟು 16 ಶಾಖೆಗಳನ್ನು ಹೊಂದಿದೆ. ಮುಂದಿನ 25 ವರ್ಷಗಳಾಗುವಾಗ 20 ಶಾಖೆಗಳನ್ನು ಹೊಂದುವ ಆಶಯ ಹೊಂದಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎನ್. ಸುಂದರ ರೈ, ಆಡಳಿತ ಮಂಡಳಿ ಸದಸ್ಯರಾದ ಅಶ್ವಿನ್ ಎಲ್. ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು, ಮಹಾಪ್ರಬಂಧಕ ವಸಂತ ಜಾಲಾಡಿ, ಸಹಾಯಕ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.



















