ಮಂಗಳೂರು: ಅನೇಕ ಯುವಕರು ಅಜ್ಞಾತವಾಗಿ ಸೈಬರ್ ಅಪರಾಧಗಳನ್ನು ಎಸಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ವೈರಲ್ ಪೋಸ್ಟ್’ಗಳ ಬಲೆಗೆ ಬೀದ್ದು, ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್’ವಾಲ್ ಅವರು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಫೇಸ್ ಬುಕ್, ಇನ್ ಸ್ಟ್ರಾಗ್ರಾಂ, ವಾಟ್ಸ್ ಆ್ಯಪ್ ಗುಂಪುಗಳು ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು, ತಪ್ಪು ಮಾಹಿತಿ ಮತ್ತು ಬೆದರಿಕೆ ಸಂದೇಶ ಹರಡುವ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿ ಸಮುದಾಯಗಳ ನಡುವೆ ಅಸಮಾಧಾನ ಉಂಟು ಮಾಡಲು ಸುಳ್ಳು ಸುದ್ದಿ ಹರಡಲು ಮತ್ತು ಇತರರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಗಂಭೀರ ಕಾನೂನು ಉಲ್ಲಂಘನೆಯಾಗಿದ್ದು, ಗಂಭೀರವಾಗಿ ಪರಿಣಿಸುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ನಕಲಿ ಖಾತೆಗಳನ್ನು ಪತ್ತೆ ಹಚ್ಚಲಾಗದು ಎಂಬುದು ತಪ್ಪು ಕಲ್ಪನೆ:
ಕೆಲವರು ನಕಲಿ ಪ್ರೊಫೈಲ್ ಗಳು ಅಥವಾ ವಿದೇಶದಲ್ಲಿ ನೋಂದಾಯಿತ ಖಾತೆಗಳನ್ನು ಬಳಸುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು. ಅವರನ್ನು ಪತ್ತೆ ಹಚ್ಚಲಾಗದು ಎಂದು ಭಾವಿಸಿಕೊಂಡಿದ್ದಾರೆ, ಅದು ಸಂಪೂರ್ಣ ತಪ್ಪು. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣ ಕಂಪೆನಿಗಳು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಚಾಲನ್ ಗಳೊಂದಿಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಗುರುತಿಸುವ ದಿಶೆಯಲ್ಲೂ ಕೆಲಸ ಮಾಡುತ್ತಿವೆ. ಖಾತೆ ಎಲ್ಲಿಂದ ತೆರೆಯಲ್ಪಟ್ಟಿದ್ದರೂ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ ಎಂದು ಅವರು ಹೇಳಿದರು.