ಶತಾಯುಷಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ (114) ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು. ಸಾಲು ಮರದ ತಿಮ್ಮಕ್ಕೆ ಎಂದೇ ಪ್ರಸಿದ್ಧರಾಗಿದ್ದ ಇವರಿಗೆ 2019ರಲ್ಲಿ ಪದ್ಮಶ್ರೀ ಲಭಿಸಿತ್ತು.
ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ವಿಪಕ್ಷ ನಾಯಕ ಆರ್. ಅಶೋಕ್ ಸಂತಾಪ
ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ‘ಮರಗಳೇ ನನ್ನ ಮಕ್ಕಳು’ ಎಂದು ಘೋಷಿಸಿದ ವೃಕ್ಷಮಾತೆ, ನಮ್ಮ ಹೆಮ್ಮೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಪರಿಸರ ಸೇವೆಯನ್ನೇ ಮಾದರಿಯಾಗಿಸಿಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನ ಉಳಿಸಿ, ಬೆಳೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಂತಾಪ ಸೂಚಿಸಿದ್ದಾರೆ.

























