ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಅಧಿಕಾರಿಗಳಲ್ಲಿ ಓರ್ವರಾದ ಅನಂತಕೃಷ್ಣ ಪ್ರಸಾದ್ (45) ಅವರು ಮೃತರಾದರು. ಸುಬ್ರಹ್ಮಣ್ಯ ಮೂಲದವರಾದ ಅನಂತಕೃಷ್ಣರು ಕೋಟಿ ಗೀತಾ ಲೇಖನಯಜ್ಞದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಮೃತರು ತಂದೆ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಿತ್ಯವೂ ಸಂಜೆ ಶ್ರೀಕೃಷ್ಣನ ದರ್ಶನ ಪಡೆದು ಅನಂತರ ರಥಬೀದಿಯಾಗಿ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದು ತೆರಳುತ್ತಿದ್ದರು. ಈ ಸಂದರ್ಭಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ತಕ್ಷಣ ರಾಘವೇಂದ್ರ ಮಠದ ಜಯತೀರ್ಥ ಆಚಾರ್ಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿದ್ದು, ತಕ್ಷಣ ಆಗಮಿಸಿದ ಒಳಕಾಡು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅನಂತಕೃಷ್ಣ ನಿಧನ ಹೊಂದಿದ್ದಾರೆ.