ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ, ನೋಟರಿ ವಕೀಲರಾಗಿ ಸೇವೆ ಸಲ್ಲಿಸಿದ್ದ ಕುಂಞಿಪಳ್ಳಿ ಜೂ.27ರಂದು ಬೆಳಗ್ಗೆ ನಿಧನರಾಗಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಬೆಳಗ್ಗೆ 10.30ರ ವೇಳೆಗೆ ಪೈಚಾರಿನ ಸ್ವಗೃಹದಲ್ಲಿ ನಿಧನರಾದರು.
ಇವರು 1987ರಲ್ಲಿ ಸುಳ್ಯ ಜಿಲ್ಲಾ ಪರಿಷತ್ ಕ್ಷೇತ್ರದಿಂದ ಸ್ಪರ್ಧಿಸಿ ಅಂದಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಜನತಾ ಪಕ್ಷದ ಅಭ್ಯರ್ಥಿ ಎಂ.ಬಿ. ಸದಾಶಿವ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹಲವು ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಿ ಬಿಟ್ಟಿದ್ದರೂ ಒಂದೇ ಪಕ್ಷಕ್ಕಾಗಿ ಕುಂಞಿಪಳ್ಳಿ ದುಡಿದಿದ್ದರು ಅನ್ನುವುದು ವಿಶೇಷ.
ಕುಂಞಪಳ್ಳಿ ಬಗ್ಗೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿಎಂ ಶಹೀದ್ ಅವರು, ‘ಕೇಂದ್ರ ಸಚಿವ ದಿವಂಗತ ಪಿಎಂ ಶಹೀದ್ ಮತ್ತು ದಿವಂಗತ ವೆಂಕಟರಮಣ ಕೊಯಿಂಗಾಜೆ ಅವರ ಜೊತೆಗೆ ಕುಂಪಳ್ಳಿಯವರಿಗೆ ಉತ್ತಮ ಒಡನಾಟವಿತ್ತು. ಹಲವು ವರ್ಷಗಳ ಹಿಂದೆ ಚುನಾವಣಾ ಪ್ರಚಾರಕ್ಕಾಗಿ ಅರಂತೋಡಿಗೆ ಬಂದಾಗ ನಾನು ಅವರೊಂದಿಗೆ ಮಾತನಾಡಿದ್ದೆ. ಚುನಾವಣೆಯಲ್ಲಿ ಗೆದ್ದರೆ ಏನು ಮಾಡುತ್ತೀರಿ..? ಎಂದು ಪ್ರಶ್ನೆ ಕೇಳಿದ್ದೆ. ಇಂದಿಗೂ ಅಂದು ನಾನು ಕೇಳಿದ್ದ ಪ್ರಶ್ನೆಯನ್ನು ಅವರು ನೆನಪು ಇಟ್ಟುಕೊಂಡಿದ್ದರು.
ಅವರು ತೆಕ್ಕಿಲ್ ಕುಟುಂಬದ ಜೊತೆಗೆ ಒಳ್ಳೆಯ ಬಾಂಧವ್ಯ ಇರಿಸಿಕೊಂಡಿದ್ದರು, ಅವರು ಪಟೇಲ್ ಮನೆತನಕ್ಕೆ ಸೇರಿದವರು. ಹೀಗಾಗಿ ನಮ್ಮ ಕುಟುಂಬಕ್ಕೆ ಹೆಚ್ಚು ಹತ್ತಿರವಾಗಿದ್ದರು. ಒಂದು ಸಲ ಹಿರಿಯ ಕಾಂಗ್ರೆಸ್ ಮುಖಂಡ ಅಂದಿನ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅರಂತೋಡಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಕುಂಞಿಪಳ್ಳಿಯವರು ಅವರ ಜೊತೆಗೆ ಕಾರಿನಲ್ಲಿ ಕುಳಿತು ಬಂದಿದ್ದರು. ನಾನು ಆಗ ಸಚಿವರನ್ನು ಭೇಟಿಯಾಗಿ ಮಾತನಾಡಿದ್ದೆ, ನನ್ನನ್ನು ಸಚಿವರಿಗೆ ಕುಂಞಿಪಳ್ಳಿಯವರೇ ಪರಿಚಯಿಸಿದ್ದರು’ ಎಂದು ಸ್ಮರಿಸಿದರು.
ಕುಂಞಿಪಳ್ಳಿ ಅವರು ದ.ಕ.ಜಿಲ್ಲಾ ಪರಿಷತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ದ.ಕ. ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. 1993ರಲ್ಲಿ ಇವರು ಕರ್ನಾಟಕ ರಾಜ್ಯ ನೋಟರಿಯಾಗಿ ನೇಮಕಕೊಂಡು ನ್ಯಾಯವಾದಿಯಾಗಿಯೂ, ನೋಟರಿ ಪಬ್ಲಿಕ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಎಣ್ಮೂರು ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಸೀದಿಗೆ ಜಾಗವನ್ನು ದಾನ ಮಾಡಿದ್ದರು. ಪಂಜದ ಪಂಚಲಿಂಗೇಶ್ವರ ದೇವಸ್ಥಾನದಲ್ಲೂ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ. ಸುಳ್ಯ ತಾಲೂಕಿನ ಸಂಯುಕ್ತ ಜಮಾಯತಿನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.