ಮುಂಬೈ: ಪುರಬ್ ಔರ್ ಪಶ್ಚಿಮ್ ಮತ್ತು ಕ್ರಾಂತಿಯಂತಹ ದೇಶಭಕ್ತಿಯ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದ ನಟ, ನಿರ್ದೇಶಕ ಮನೋಜ್ ಕುಮಾರ್ ಅವರು ಶುಕ್ರವಾರ ಮುಂಜಾನೆ ನಿಧನಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರಂತೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ 3:30 ಕ್ಕೆ ನಿಧನಹೊಂದಿರುವುದಾಗಿ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ
ಮನೋಜ್ ಕುಮಾರ್ ದೇಶಭಕ್ತಿಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಅದಕ್ಕಾಗಿಯೇ ಅವರು ಬಾಲಿವುಡ್‌ನ ‘ಭರತ್ ಕುಮಾರ್’ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಜೊತೆಗೆ ದೇಶಭಕ್ತಿಯ ಚಿತ್ರದ ಪಾತ್ರಗಳಲ್ಲಿಯೂ ಅಭಿನಯಿಸಿ ಮಿಂಚಿದ್ದಾರೆ. ಅದರಲ್ಲಿ ಪ್ರಮುಖ ಚಿತ್ರಗಳೆಂದರೆ ಉಪಕಾರ್, ಶಹೀದ್, ಪುರಬ್ ಔರ್ ಪಶ್ಚಿಮ್, ರೋಟಿ ಕಪ್ಲಾ ಔರ್ ಮಕನ್ ಇತ್ಯಾದಿ.
ದೇಶಭಕ್ತಿಯ ಚಿತ್ರಗಳಲ್ಲದೆ, ಅವರು “ಹರಿಯಾಲಿ ಔರ್ ರಾಸ್ತಾ”, “ವೋ ಕೌನ್ ಥಿ”, “ಹಿಮಾಲಯ ಕಿ ಗಾಡ್ ಮೇ”, “ದೋ ಬದನ್”, “ಪತ್ತರ್ ಕೆ ಸನಮ್”, “ನೀಲ್ ಕಮಾಲ್” ಮತ್ತು “ಕ್ರಾಂತಿ” ಮುಂತಾದ ಇತರ ಗಮನಾರ್ಹ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. 1995 ರ ‘ಮೈದಾನ್-ಎ-ಜಂಗ್’ ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಪ್ರಧಾನಿ ಮೋದಿ ಸಂತಾಪ:
ಮನೋಜ್ ಕುಮಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು ಈ ಕುರಿತು ಟ್ವಿಟ್ ಮಾಡಿದ ಅವರು ‘ಮನೋಜ್ ಕುಮಾರ್ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ. ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದರು, ಅವರ ದೇಶಭಕ್ತಿ ಅವರ ಚಲನಚಿತ್ರಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಅವರು ಸದಾ ನನ್ನ ನೆನಪಿನಲ್ಲಿ ಉಳಿಯುತ್ತಾರೆ ಎಂದು ಟ್ವಿಟ್ ಮಾಡಿದ್ದಾರೆ.
ಪ್ರಶಸ್ತಿಗಳು ಮತ್ತು ಗೌರವಗಳು
ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮನೋಜ್ ಕುಮಾರ್ ಅವರಿಗೆ 1992 ರಲ್ಲಿ ಪದ್ಮಶ್ರೀ ಮತ್ತು 2015 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.
ಸಂತಾಪ:
ಮನೋಜ್ ಕುಮಾರ್ ಅವರ ನಿಧನಕ್ಕೆ ಬಾಲಿವುಡ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.