ಭುವನೇಶ್ವರ : ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ಬಿಜೆಪಿ ನಾಯಕ ದೇಬೇಂದ್ರ ಪ್ರಧಾನ್ ಸೋಮವಾರ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಒಡಿಶಾ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ಪ್ರಧಾನ್ ನವದೆಹಲಿಯಲ್ಲಿ ಕೊನೆಯುಸಿರೆಳೆದರು. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಜನಪ್ರಿಯ ಸಾರ್ವಜನಿಕ ನಾಯಕ ಮತ್ತು ಸಮರ್ಥ ಸಂಸದೀಯ ಪಟು ಎಂದು ಹೇಳಿದ್ದಾರೆ.
“ಅವರು 1999 ರಿಂದ 2001 ರವರೆಗೆ ಕೇಂದ್ರ ಸಾರಿಗೆ ಮತ್ತು ಕೃಷಿ ಸಚಿವರಾಗಿ ತಮ್ಮ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸಿದ್ದರು. ಸಾರ್ವಜನಿಕ ಪ್ರತಿನಿಧಿ ಮತ್ತು ಸಂಸದರಾಗಿ, ಅವರು ಅನೇಕ ಕಲ್ಯಾಣ ಕಾರ್ಯಗಳನ್ನು ಮಾಡುವ ಮೂಲಕ ಸಾಮಾನ್ಯ ಜನರ ಪ್ರೀತಿಗೆ ಪಾತ್ರರಾಗಿದ್ದರು” ಎಂದು ಮಾಝಿ ಹೇಳಿದರು.
“ಅವರು ತಮ್ಮ ಇಡೀ ಜೀವನವನ್ನು ರಾಜ್ಯದ ಅಭಿವೃದ್ಧಿಗಾಗಿ ಸೇವಾ ಮನೋಭಾವ ಮತ್ತು ದೃಢನಿಶ್ಚಯದಿಂದ ಮುಡಿಪಾಗಿಟ್ಟವರು, ದೇಶ ಮತ್ತು ರಾಜ್ಯವು ಒಬ್ಬ ಗಣ್ಯ ಸಾರ್ವಜನಿಕ ಸೇವಕನನ್ನು ಕಳೆದುಕೊಂಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ನಂತರ ಮುಖ್ಯಮಂತ್ರಿಗಳು ಅವರ ಪುತ್ರನೊಂದಿಗೆ ಮಾತನಾಡಿ ಸಂತಾಪ ಸೂಚಿಸಿದರು.
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್, ಪ್ರಧಾನ್ ಅವರ ಅಪ್ರತಿಮ ಸಂಘಟನಾ ಕೌಶಲ್ಯ ಮತ್ತು ಅಚಲ ವ್ಯಕ್ತಿತ್ವಕ್ಕಾಗಿ ಅವರು ಸದಾ ಸ್ಮರಣೀಯರು ಎಂದು ಹೇಳಿದರು. “ಡಾ. ಪ್ರಧಾನ್ ಅವರ ನಿಧನದಿಂದ ರಾಜ್ಯವು ಪ್ರಭಾವಿ ರಾಜಕೀಯ ವ್ಯಕ್ತಿ ಮತ್ತು ಜನಪ್ರಿಯ ರಾಜಕಾರಣಿಯನ್ನು ಕಳೆದುಕೊಂಡಿದೆ” ಎಂದರು.