Friday, November 22
Share News

ಮಂಗಳೂರು: ಮಂಗಳೂರಿನಲ್ಲಿ ಉದಯವಾಣಿಯಂದ್ರೆ ಮನೋಹರ ಪ್ರಸಾದ್ ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿ ಗಳಿಸಿದ್ದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ (65) ನಮ್ಮನ್ನಗಲಿದ್ದಾರೆ. ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಎಂಬ ಪುಟ್ಟ ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಪಿಯುಸಿ, ಪದವಿ ಶಿಕ್ಷಣ ಪೂರೈಸಿ ಅಂದಿನ ‘ನವಭಾರತ’ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದ್ದರು. ಆನಂತರ, ಕರಾವಳಿಯ ಜನಪ್ರಿಯ ಉದಯವಾಣಿ ಪತ್ರಿಕೆ ಸೇರ್ಪಡೆಯಾಗಿ ಮಂಗಳೂರು ವಿಭಾಗದ ಮುಖ್ಯ ವರದಿಗಾರರಾಗಿ, ವಿಭಾಗದ ಮುಖ್ಯಸ್ಥರಾಗಿದ್ದರು. 36 ವರ್ಷಗಳ ಸುದೀರ್ಘ ಸೇವೆಯ ಬಳಿಕ ಸಹಾಯಕ ಸಂಪಾದಕರಾಗಿ ಎರಡು ವರ್ಷಗಳ ಹಿಂದೆ ವೃತ್ತಿಗೆ ವಿದಾಯ ಹೇಳಿದ್ದರು.

ವೃತ್ತಿಯ ಜೊತೆಗೆ ಕತೆಗಾರರಾಗಿ, ಕವಿಯಾಗಿ, ಉತ್ತಮ ವಾಗ್ಮಿಯಾಗಿದ್ದರೂ ಮನೋಹರ ಪ್ರಸಾದ್ ಅಹಂ ಇಲ್ಲದೆ, ಎಲ್ಲರೊಂದಿಗೂ ಬೆರೆಯುತ್ತಿದ್ದವರು. ಅಗಾಧ ನೆನಪಿನ ಶಕ್ತಿ ಅವರ ದೊಡ್ಡ ಪ್ಲಸ್ ಆಗಿತ್ತು. 30 ವರ್ಷಗಳ ಹಿಂದಿನ ಘಟನೆಯನ್ನೂ ಇಸವಿ, ದಿನಾಂಕದ ಜೊತೆ ಸಚಿತ್ರ ವಿವರದಂತೆ ಮುಂದಿಡುತ್ತಿದ್ದರು. ಹಾಗಾಗಿ ಅವರ ಭಾಷಣಗಳೇನಿದ್ದರೂ ಬೋರ್ ಹೊಡೆಸುತ್ತಿರಲಿಲ್ಲ. ವಿಮಾನ ದುರಂತ, ನಕ್ಸಲ್ ಚಟುವಟಿಕೆಯಂತಹ ಅಪರೂಪದ ಘಟನೆಗಳ ಸಂದರ್ಭದಲ್ಲಿ ಕಾಡು ಮೇಡು ಸುತ್ತಿಯೇ ವರದಿಗಳನ್ನು ಬರೆಯುತ್ತಿದ್ದವರು. ತನ್ನೊಂದಿಗಿದ್ದವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಪರೂಪದ ಮನುಷ್ಯ.

ಮನೋಹರ ಪ್ರಸಾದ್ ಬೆಂಗಳೂರಿನ ಟಿವಿ ಮಾಧ್ಯಮದಲ್ಲಿ ಇರುತ್ತಿದ್ದರೆ ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದರು ಎನ್ನುವ ಭಾವನೆಗಳಿದ್ದವು. ಗಡಸು ಧ್ವನಿ, ಕನ್ನಡ, ಇಂಗ್ಲಿಷ್ ಎರಡು ಭಾಷೆಯಲ್ಲೂ ನಿರರ್ಗಳವಾಗಿ ಮಾತನಾಡುತ್ತಿದ್ದ ಪ್ರತಿಭೆ ಕರಾವಳಿಯ ಕನ್ನಡ ಪತ್ರಿಕೋದ್ಯಮದಲ್ಲಿ ಮತ್ತೊಬ್ಬರಿಲ್ಲ. ಅವರಿದ್ದಷ್ಟು ಕಾಲವೂ ಉದಯವಾಣಿಗೆ ಒಂದಷ್ಟು ಖದರ್ ಇತ್ತು. ಮನೋಹರಣ್ಣ ಈಗ ಇಲ್ಲ ಎನ್ನುವುದನ್ನೇ ಅರಗಿಸಿಕೊಳ್ಳಲು ಆಗಲ್ಲ. ಮನೋಹರ ಪ್ರಸಾದ್ ವಿಶೇಷ ಅಂದ್ರೆ, ಮದುವೆಯಾಗದೆ ಮಂಗಳೂರಿನಲ್ಲಿ ಒಬ್ಬಂಟಿಯಾಗೇ ಜೀವನ ನಡೆಸಿದ್ದರು. ಮನೆ ಕೆಲಸಕ್ಕೆ ಅಂತಷ್ಟೇ ಕೂಲಿಗೆ ಇಟ್ಟುಕೊಂಡಿದ್ದರು. ಕಾಲು ನೋವಿದ್ದರೂ ಇತ್ತೀಚಿನ ವರೆಗೂ ಕಾರ್ಯಕ್ರಮ ನಿರೂಪಣೆಗೆ, ಪ್ರಮುಖ ಕಾರ್ಯಕ್ರಮಗಳಿಗೆ ಬರುತ್ತಿದ್ದರು.


Share News

Comments are closed.

Exit mobile version