ಪುತ್ತೂರು: ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯ 2023- 24ನೇ ಸಾಲಿನ ಬೆಳೆ ವಿಮಾ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಪಾವತಿಯನ್ನು ಈ ಬಾರಿ ನವೆಂಬರ್ ಆರಂಭದಲ್ಲೇ ಜಮೆ ಮಾಡಲಾಗಿದ್ದು, ಮುಂದಿನ 20 ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಮೊತ್ತ ವರ್ಗಾಯಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಪಡೆಯಲು ಪ್ರೀಮಿಯಂ ಪಾವತಿಸಬಹುದು. ಇದರ ಮೂಲಕ ಬೆಳೆ ನಷ್ಟಕ್ಕೆ ವಿಮಾ ಹಣ ದೊರೆಯುತ್ತದೆ. ಈ ಬಾರಿ ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ರೂ.6400 ಮತ್ತು ಕಾಳುಮೆಣಸು ಬೆಳೆಗೆ ಪ್ರತಿ ಹೆಕ್ಟೇರ್ಗೆ ರೂ. 2350 ಪ್ರೀಮಿಯಂ ಆಗಿತ್ತು. ಹೀಗಾಗಿ. ಅಡಿಕೆ ಬೆಳೆಗಾರರು ಪ್ರತಿ ಹೆಕ್ಟೇರ್ಗೆ ರೂ.1.28 ಲಕ್ಷ ಮತ್ತು ಕಾಳುಮೆಣಸು ಬೆಳೆಗಾರರು ರೂ.46 ಸಾವಿರವರೆಗೆ ವಿಮಾ ಮೊತ್ತ ಪಡೆಯಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಈ ಯೋಜನೆಯ ಅಡಿಯಲ್ಲಿ ವಿಮೆ ನೀಡಲಾಗಿದ್ದು, ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೋಂದಾವಣೆ ಮಾಡಿದ್ದರು.
ಜುಲೈ 1ರಿಂದ ಜೂನ್ 30ರ ಅವಧಿಯ ಮಳೆಯ ಆಧಾರದ ಮೇಲೆ ರೈತರಿಗೆ ವಿಮಾ ಮೊತ್ತ ನೀಡಲಾಗುತ್ತಿದ್ದು, ಎಲ್ಲಾ ಗ್ರಾಮಗಳ ಫಲಾನುಭವಿಗಳಿಗೆ ಒಂದೇ ರೀತಿಯ ಮೊತ್ತ ದೊರೆಯುವುದು. ಜಿಲ್ಲೆಯಲ್ಲಿ ನೆರೆದ ಮಳೆಯ ಪ್ರಕಾರ ವಿಮಾ ಮೊತ್ತ ಲೆಕ್ಕಾಚಾರ ಮಾಡಲಾಗುತ್ತದೆ.
ಕಳೆದ 10 ದಿನಗಳಿಂದ ಕೃಷಿಕರ ಖಾತೆಗಳಿಗೆ ಬೆಳೆ ವಿಮಾ ಮೊತ್ತ ಜಮೆಯಾಗಲು ಆರಂಭಗೊಂಡಿದೆ. ಇನ್ನು 20 ರಿಂದ 25 ದಿನಗಳಲ್ಲಿ ಎಲ್ಲಾ ಕೃಷಿಕರಿಗೆ ಪಾವತಿಯಾಗಲಿದೆ. ಮಳೆಯ ಆಧಾರದಲ್ಲಿ ವಿಮಾ ಮೊತ್ತದಲ್ಲಿ ಬದಲಾವಣೆ ಇರುತ್ತದೆ. – ಮಂಜುನಾಥ್, ತೋಟಗಾರಿಕಾ ಉಪನಿರ್ದೇಶಕರು, ಮಂಗಳೂರು