ಪುತ್ತೂರು: ಇಲ್ಲಿನ ಹಾರಾಡಿ ಸಮೀಪದ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವಕನ ಮಾಹಿತಿ ಲಭ್ಯವಾಗಿದ್ದು, ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತ ಯುವಕನನ್ನು ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ನಿವಾಸಿ ಸುಮತಿ ಎಂಬುವವರ ಪುತ್ರ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಕುಮಾರ್ ಶಿಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲ ಸಮಯದ ಹಿಂದೆ ಮನೆಗೆ ಬಂದಿದ್ದರು. ನಿನ್ನೆ (ಫೆ.20) ಮಧ್ಯಾಹ್ನ ಮನೆಯಿಂದ ಹೊರಟಿದ್ದ ಅವರು, ರಾತ್ರಿ ವೇಳೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಬಳಿ ರೈಲಿನ ಅಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಘಟನೆ ವಿವರ:
ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ಫೆ.20ರಂದು ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಕಪ್ಪು ಪ್ಯಾಂಟ್, ಫುಲ್ ಕೈ ಶರ್ಟ್ ಧರಿಸಿ, ಕೈಯಲ್ಲಿ ವಾಚ್, ಪಕ್ಕದಲ್ಲೇ ಕಪ್ಪು ಬಣ್ಣದ ಬ್ಯಾಗ್, ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿತ್ತು. ಘಟನೆ ಕುರಿತು ರೈಲಿನ ಪೈಲಟ್ ಸ್ಟೇಷನ್‌ಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ಯಲಾಗಿತ್ತು. ಆತ್ಮಹತ್ಯೆಗೆ ಕಾರಣ ನಿಗೂಡವಾಗಿದ್ದು, ತನಿಖೆ ಚುರುಕುಗೊಂಡಿದೆ.





















